ಕಾಡುಗಳ್ಳತನ ದಂಧೆಯಲ್ಲಿ ಖಾವಿ ವೇಷಧಾರಿಯೇ ಕಿಂಗ್ ಪಿನ್; ಕೃಷ್ಣಮೃಗಗಳ ಚರ್ಮ ವಶಕ್ಕೆ!

ವನ್ಯಜೀವಿ ಕಳ್ಳತನದ ದಂಧೆಯಲ್ಲಿ ತೊಡಗಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸ್ವಾಮೀಜಿ ವೇಷಧಾರಿಯೊಬ್ಬನನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. 
ಬಂಧಿತರ ಕಾಡುಗಳ್ಳರು
ಬಂಧಿತರ ಕಾಡುಗಳ್ಳರು

ಹುಬ್ಬಳ್ಳಿ: ವನ್ಯಜೀವಿ ಕಳ್ಳತನದ ದಂಧೆಯಲ್ಲಿ ತೊಡಗಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸ್ವಾಮೀಜಿ ವೇಷಧಾರಿಯೊಬ್ಬನನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. 

32 ವರ್ಷದ ಬಸಪ್ಪ ಮೆಡ್ಲೇರಿ ಜಿಲ್ಲೆಯ ಕಾಡುಗಳ್ಳತನ ದಂಧೆಯ ದೊರೆ. ಈ ಪ್ರಮುಖ ಕಿಂಗ್ ಪಿನ್ ಸೇರಿದಂತೆ ಇತರ ನಾಲ್ವರನ್ನು ಬೆಳಗಾವಿ ವಿಭಾಗದ ಫಾರೆಸ್ಟ್ ಮೊಬೈಲ್ ಸ್ಕ್ವಾಡ್ (ಎಫ್‌ಎಂಎಸ್) ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ ಕೃಷ್ಣಮೃಗ ಚರ್ಮಗಳನ್ನು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಕಾಡುಮೃಗಗಳನ್ನು ಹಿಡಿಯಲು ಬಳಸಿದ್ದ ಬಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಸಿಸಿಎಫ್ ಮಂಜುನಾಥ್ ಆರ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ ಎಫ್ ಎಂಎಸ್ ಬೆಳಗಾವಿಯ ಡಿಸಿಎಫ್ ಎಸ್ ಕೆ ಕಲ್ಲೋಳಿಕರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಪ್ರಮುಖ ಆರೋಪಿ ಬಸಪ್ಪ ಮೆಡ್ಲೇರಿ ಸಣ್ಣ ಆಶ್ರಮ ನಡೆಸುತ್ತಿದ್ದ, ಹಲವು ಗ್ರಾಮಸ್ಥರಿಗೆ ಧಾರ್ಮಿಕ ಸಲಹೆ ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಗ್ಧ ಗ್ರಾಮಸ್ಥರಿಗೆ ಆಧ್ಯಾತ್ಮಿಕ ಸಹಾಯದ ಭರವಸೆ ನೀಡುತ್ತಿದ್ದ. ಅಂತೆಯೇ ಗ್ರಾಮಸ್ಥರಿಗೆ ವನ್ಯಜೀವಿಗಳು ದೊರೆತರೆ ಅವುಗಳನ್ನು ತನಗೆ ನೀಡುವಂತೆ ಸೂಚಿಸುತ್ತಿದ್ದ. ಇದಲ್ಲದೆ, ಈ ಪ್ರಾಣಿಗಳಿಗೆ ಮೀಸಲಾದ ಅಭಯಾರಣ್ಯವನ್ನು ಹೊಂದಿರುವ ರಾಣೆಬೆನ್ನೂರಿನಲ್ಲಿ ಉತ್ತಮ ಸಂಖ್ಯೆಯಲ್ಲಿರುವ ಕೃಷ್ಣಮೃಗಗಳನ್ನು ಕೊಲ್ಲುವಲ್ಲಿ ಈತ ತೊಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಗ್ರಾಮಸ್ಥರ ವಿಶ್ವಾಸ ಗಳಿಸಿದ್ದ ಈ ಕಳ್ಳ ಸ್ವಾಮೀಜಿ ಗ್ರಾಮಸ್ಥರಿಗೆ ಸೇರಿದ ಅರಣ್ಯ ಪ್ರದೇಶದ ಸಮೀಪದ ಕೃಷಿ ಭೂಮಿಗೆ ವಿದ್ಯುತ್ ಫೆನ್ಸಿಂಗ್ ಅಳವಡಿಸುತ್ತಿದ್ದ. ಈ ಬೇಲಿಗೆ ಸಿಲುಕಿ ಕಾಡುಪ್ರಾಣಿಗಳು ಸಾವನ್ನಪ್ಪಿದರೆ ಅವಗಳನ್ನು ತಂದು ಅವುಗಳ ಮಾಂಸ, ಚರ್ಮ, ಮೂಳೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಕಾಡು ಪ್ರಾಣಿಗಳ ಮಾಂಸವನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಿ, ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮಾರಲಾಗುತ್ತಿತ್ತು. ಕೃಷ್ಣಮೃಗಗಳ ಕೊಂಬುಗಳನ್ನು ಲಕ್ಷಾಂತರ ರೂಗೆ ಮಾರಾಟ ಮಾಡುತ್ತಿದ್ದ. ಕೃಷ್ಣಾಜಿನ ಎಂದೂ ಕರೆಯಲ್ಪಡುವ ಬ್ಲಾಕ್ ಬಕ್‌ (ಕೃಷ್ಣಮೃಗ)ನ ಚರ್ಮಕ್ಕೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಇದೇ ಕಾರಣಕ್ಕೆ ಕೃಷ್ಣಮೃಗಗಳ ಚರ್ಮವನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಹಾವೇರಿಯಲ್ಲಿ ಕೃಷ್ಣಮೃಗ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹಲವು ಆವೃತ್ತಿಗಳಿವೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದು, ಆರೋಪಿಗಳು ಬಲೆ ಮತ್ತು ತರಬೇತಿ ಪಡೆದ ನಾಯಿಗಳನ್ನು ಬಳಸಿ ಕೃಷ್ಣಮೃಗಗಳನ್ನು ಓಡಿಸುತ್ತಿದ್ದಾರೆ. ಐವರು ಆರೋಪಿಗಳ ಪೈಕಿ ಒಬ್ಬ, ಕಳ್ಳ ಸ್ವಾಮೀಜಿಯ ಸಹೋದರ, ನಾಗಪ್ಪ ಮೆಡ್ಲೇರಿ ಈತ ಕೂಡ ಈ ಹಿಂದೆ ಸಾಕಷ್ಟು ಕಾಡುಪ್ರಾಣಿಗಳ ಕಳ್ಳತನ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾನೆ. 2021 ರಲ್ಲಿ ಅವರು ಗ್ರಾಹಕರಿಗೆ ಸ್ಯಾಂಡ್ ಬೋವಾ (ಎರಡು ತಲೆ ಹಾವು) ಹಾವನ್ನು ಮಾರಾಟ ಮಾಡಲು ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

"ಈ ಹಿಂದೆ ಕೃಷ್ಣಮೃಗ ಬೇಟೆಗೆ ಸಂಬಂಧಿಸಿದಂತೆ ಹಲವಾರು ಬಂಧನಗಳು ನಡೆದಿವೆ. ಉತ್ತರ ಕರ್ನಾಟಕದ ಅನೇಕ ಆಟೋ ರಿಕ್ಷಾಗಳಲ್ಲಿ ಕೃಷ್ಣಮೃಗ ಕೊಂಬುಗಳಿವೆ. ಅವುಗಳನ್ನು ಆರ್‌ಟಿಒ ಅಥವಾ ಅರಣ್ಯ ಇಲಾಖೆ ಎಂದಿಗೂ ನಿಲ್ಲಿಸುವುದಿಲ್ಲ. ಈ ಬೇಟೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ತಪಾಸಣೆ ಇರಬೇಕು. ಈಗಾಗಲೇ ಅವುಗಳ ಮೇಯುವ ಪ್ರದೇಶಗಳು ಕುಗ್ಗಿದ್ದು, ವನ್ಯಜೀವಿ ಕಾಯ್ದೆಯಡಿ ಕೃಷ್ಣಮೃಗವು ಶೆಡ್ಯೂಲ್ 1 ಪ್ರಾಣಿಯಾಗಿದ್ದರೂ, ಉತ್ತರ ಕರ್ನಾಟಕದಲ್ಲಿ ಪ್ರಾಣಿಗಳಿಗೆ ಅಗತ್ಯ ಗಮನ ಸಿಗುತ್ತಿಲ್ಲ ಎಂದು ವನ್ಯಜೀವಿ ಕಾರ್ಯಕರ್ತ ಬಸವರಾಜ ಓಂಕಾರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com