42 ವರ್ಷಗಳ ನಂತರ, ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಭೂಮಿ ಸ್ವಾಧೀನಕ್ಕೆ ಬಿಡಿಎಗೆ ಸುಪ್ರೀಂ ಅನುಮತಿ
ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಸುಮಾರು 70 ಕೋಟಿ ರೂಪಾಯಿ ಮೌಲ್ಯದ 3 ಎಕರೆ 23 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಸುಪ್ರೀಂ ಕೋರ್ಟ್ ಸೋಮವಾರ...
Published: 27th July 2022 03:31 PM | Last Updated: 27th July 2022 03:42 PM | A+A A-

ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಭೂಮಿ
ಬೆಂಗಳೂರು: ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಸುಮಾರು 70 ಕೋಟಿ ರೂಪಾಯಿ ಮೌಲ್ಯದ 3 ಎಕರೆ 23 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಈ ಆಸ್ತಿಯನ್ನು ಬಿಟ್ಟು ಕೊಡಲು ನಿರಾಕರಿಸಿದ ಕುಟುಂಬದಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡಿಎ 42 ವರ್ಷಗಳಿಂದ ಕಾನೂನು ಹೋರಾಟ ನಡೆಸಿದ್ದು, ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
“ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಬಿಡಿಎ ಉತ್ತರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಿ ಕುಮಾರ್ ಅವರು, ಇದೊಂದು ಮಹತ್ವದ ತೀರ್ಪು. ಈ ಹಿಂದೆಯೇ ಬಿಡಿಎ ಇಲ್ಲಿ ಲೇಔಟ್ ಅಭಿವೃದ್ಧಿಪಡಿಸಿದ್ದು, ವ್ಯಾಜ್ಯಗಳಿಂದಾಗಿ ಈ ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ನಾವು 1980 ರಿಂದ ಕಾನೂನು ಹೋರಾಟ ನಡೆಸಿದ್ದೇವೆ. ಅಂತಿಮವಾಗಿ ಭೂಮಿ ನಮ್ಮ ವಶಕ್ಕೆ ಬರುತ್ತಿದ್ದು, ಈಗ ನಾವು ಈ ಆಸ್ತಿಯಲ್ಲಿ 40x60 ಚದರ ಅಡಿಯ 35 ಸೈಟ್‌ಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಬಿಡಿಎ ನಿರ್ಮಿಸಿರುವ 'ಅತ್ಯಂತ ದುಬಾರಿ' ಫ್ಲಾಟ್‌ಗಳು ಶೀಘ್ರದಲ್ಲೇ ಮಾರಾಟ
ಈ ಜಾಗದಲ್ಲಿ ನಮ್ಮಿಂದ ಸೈಟ್ ಪಡೆಯಲು 10 ರಿಂದ 15 ವರ್ಷಗಳಿಂದ ಕಾಯುತ್ತಿರುವ ಕ್ರೀಡಾಪಟುಗಳು ಅಥವಾ ಪ್ರಶಸ್ತಿ ವಿಜೇತರಂತಹ ವಿಶೇಷ ವರ್ಗದ ಸೈಟ್ ಹಂಚಿಕೆದಾರರಿಗೆ ನಾವು ಇದನ್ನು ಹಸ್ತಾಂತರಿಸುತ್ತೇವೆ ಎಂದು ಜಿ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
"ಡಿನೋಟಿಫಿಕೇಶನ್ ಆದೇಶಗಳಿಂದ ಅರ್ಕಾವತಿ ಲೇಔಟ್‌ನಲ್ಲಿ ತಮ್ಮ ಸೈಟ್‌ಗಳನ್ನು ಕಳೆದುಕೊಂಡ ಅನೇಕರು ಪರ್ಯಾಯ ಸೈಟ್‌ಗಳಿಗಾಗಿ ಕಾಯುತ್ತಿದ್ದಾರೆ ಮತ್ತು ಅವರಿಗೆ ಇಲ್ಲಿ ಸೈಟ್‌ಗಳನ್ನು ಒದಗಿಸಬಹುದು" ಎಂದು ಅವರು ಹೇಳಿದ್ದಾರೆ.
ಬಿಡಿಎ 1977 ರಲ್ಲಿ ನಾರಾಯಣ ರೆಡ್ಡಿ ಅವರಿಗೆ ಸೇರಿದ್ದ (ಸರ್ವೆ ನಂ. 345) ಆಸ್ತಿಯನ್ನು ಪ್ರಾಥಮಿಕ ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಿತ್ತು ಮತ್ತು 1980 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತು. ಆದರೆ ಅವರ ಕುಟುಂಬ ಬಿಡಿಎ ಅಧಿಸೂಚನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು ಎಂದು ಅವರು ವಿವರಿಸಿದ್ದಾರೆ.