ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ಅವರು ಜಿಲ್ಲೆಯಲ್ಲಿದ್ದಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ: ಸಿದ್ದರಾಮಯ್ಯ
ಕಳೆದ ರಾತ್ರಿ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಫಾಜಿಲ್ ಮಂಗಲಪೇಟೆ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
Published: 29th July 2022 12:11 PM | Last Updated: 29th July 2022 03:49 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಕಳೆದ ರಾತ್ರಿ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಫಾಜಿಲ್ ಮಂಗಲಪೇಟೆ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಇದು ನಡೆದಿರುವುದು ನೋಡಿದರೆ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ ಎಂಬುದು ಗೊತ್ತಾಗುತ್ತದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ.ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು ಎಂದು ಟೀಕಿಸಿದ್ದಾರೆ.
ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಅವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಈ ಅಸಮರ್ಥ ಸರ್ಕಾರಕ್ಕೆ ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ, ಇದರ ಹೊಣೆಯನ್ನು ಸಿಎಂ ಬೊಮ್ಮಾಯಿ ಮತ್ತು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಹೊತ್ತುಕೊಂಡು ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಸವರಾಜ ಬೊಮ್ಮಾಯಿಯವರು ಅತ್ಯಂತ ದುರ್ಬಲ ಮುಖ್ಯಮಂತ್ರಿ. ಈ ಕೊಲೆ ಪ್ರಕರಣಗಳಲ್ಲಿ ತಕ್ಷಣವೇ ಅಪರಾಧಿಗಳನ್ನು ಪತ್ತೆಹಚ್ಚಿ ಕಠಿಣವಾದ ಶಿಕ್ಷೆ ಕೊಡಿಸಬೇಕು. ರಾಜ್ಯ ಸರ್ಕಾರ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಮತಾಂಧರೇ ಇರಲಿ, ಕೋಮುವಾದಿಗಳೇ ಇರಲಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಸುರತ್ಕಲ್ ಬಂದ್: ಫಾಜಿಲ್ ಹತ್ಯೆಯನ್ನು ಖಂಡಿಸಿ ವರ್ತಕರು ಇಂದು ಸುರತ್ಕಲ್ ಬಂದ್ ಗೆ ಕರೆ ನೀಡಿದ್ದಾರೆ. ವ್ಯಾಪಾರಿಗಳು ಸ್ವಯಂಘೋಷಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಫಾಜಿಲ್ ಹತ್ಯೆಯನ್ನು ಖಂಡಿಸಿದ್ದಾರೆ.
ಇಂದು ಬೆಳಗ್ಗೆ ಮಂಗಲಪೇಟೆಯ ಮಸೀದಿಯಲ್ಲಿ ಫಾಜಿಲ್ ಮೃತದೇಹವನ್ನು ಇರಿಸಲಾಗಿದ್ದು ಭಾರೀ ಪ್ರಮಾಣದಲ್ಲಿ ಜನಸ್ತೋಮ ಸೇರಿತ್ತು.
#FaizalMurder Large gathering at a mosque in Mangalapete near #Suratkal where Fazil's body was kept for public viewing @XpressBengaluru @sdpikarnataka @BJP4Karnataka @INCKarnataka @ramupatil_TNIE pic.twitter.com/vlegaaZntM
— vincent dsouza (@vinndz_TNIE) July 29, 2022