ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಯನ್ನು ಸರ್ಕಾರ ಕೇವಲ ಕೊಲೆಯಾಗಿ ನೋಡುವುದಿಲ್ಲ, ಸಿದ್ದರಾಮಯ್ಯ ಹೇಳಿದ್ದು ವೇದವಾಕ್ಯ ಅಲ್ಲ: ಸಿಎಂ ಬೊಮ್ಮಾಯಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಮೂರೂ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಪ್ರಕರಣ ತನಿಖೆಯಲ್ಲಿ ಹಿಂದೆ ಬಿದ್ದಿಲ್ಲ, ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ(ಸಂಗ್ರಹ ಚಿತ್ರ)
ಸಿಎಂ ಬೊಮ್ಮಾಯಿ(ಸಂಗ್ರಹ ಚಿತ್ರ)

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಮೂರೂ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಪ್ರಕರಣ ತನಿಖೆಯಲ್ಲಿ ಹಿಂದೆ ಬಿದ್ದಿಲ್ಲ, ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಈ ಮೂರೂ ಪ್ರಕರಣಗಳನ್ನು ಕೇವಲ ಕೊಲೆಯಾಗಿ ನೋಡುವುದಿಲ್ಲ, ನಾವು ಇನ್ನು ಕೆಲವೇ ದಿನಗಳಲ್ಲಿ ಏನು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಾದುನೋಡಿ ಎಂದರು.

ನಿನ್ನೆ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬರುವಾಗ ಮಂಗಳೂರಿನಲ್ಲಿ ವಿಮಾನ ಹತ್ತುವ ವೇಳೆಗೆ ಮತ್ತೊಂದು ಕೊಲೆಯಾಗಿರುವ ಸುದ್ದಿ ಕೇಳಿಬಂತು. ಕೂಡಲೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಸ್ಥಳದಲ್ಲಿರಲು ಸೂಚಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಲಹೆಗಳನ್ನು ನೀಡಿದ್ದೇವೆ ಎಂದರು.

ಪ್ರತಿಯೊಬ್ಬ ನಾಗರಿಕನ ಜೀವನವು ಸರ್ಕಾರಕ್ಕೆ ಮುಖ್ಯ, ಮೂರೂ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇವತ್ತು ಬೆಂಗಳೂರಿನಲ್ಲಿ ಡಿಜಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದೇನೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕರಾವಳಿ ಭಾಗದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ನಿರ್ಬಂಧ ಹೇರುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಮಂಗಳೂರಿಗೆ ಹೊಂದಿಕೊಂಡು ಕೇರಳ ಗಡಿಯಿದೆ. ಅಲ್ಲಿ ಸುಮಾರು 50 ರಸ್ತೆಗಳಿದ್ದು ಅವುಗಳನ್ನು ಯಾವ ರೀತಿ ಕಾನೂನು ಸುವ್ಯವಸ್ಥಿತವಾಗಿ ಕಟ್ಟೆಚ್ಚರ ವಹಿಸಬೇಕೆಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ವಿಶೇಷ ಪೊಲೀಸ್ ಕ್ರಮಗಳನ್ನು ಈ ಎರಡು ಜಿಲ್ಲೆಗಳಲ್ಲಿ ಕೈಗೊಳ್ಳುವ ಕುರಿತು ಇಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ವಿವರಿಸಿದರು. 

ಸಿದ್ದರಾಮಯ್ಯನವರಿದ್ದಾಗ ಸರಣಿ ಕೊಲೆ 32; ಸಿದ್ದರಾಮಯ್ಯನರು ಅಧಿಕಾರದಲ್ಲಿದ್ದಾಗ 32 ಸರಣಿ ಕೊಲೆಗಳಾಗಿದ್ದವು. ಅವರು ಏನು ಮಾಡುತ್ತಿದ್ದರಂತೆ ಆಗ, ಸುಮ್ಮನೆ ಎಲ್ಲದಕ್ಕೂ ರಾಜಕಾರಣ ಹೇರುವುದು ಸರಿಯಲ್ಲ, ಅವರ ಹೇಳಿಕೆಗೆ ಏನೂ ಮಹತ್ವವಿಲ್ಲ, ಪರಿಸ್ಥಿತಿಯನ್ನು ಸಮರ್ಥವಾಗಿ ಹೇಗೆ ನಿಭಾಯಿಸಬೇಕೆಂದು ನಮಗೆ ಗೊತ್ತಿದೆ ಎಂದು ಸಿದ್ದರಾಮಯ್ಯನವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯಸರ್ಕಾರ ವಿಫಲವಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದರು.

ಮಸೂದ್ ಹತ್ಯೆಯ ಆರೋಪಿಗಳನ್ನು ದಸ್ತಗಿರಿ ಮಾಡಿದ್ದೇವೆ. ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ವಿಚಾರಣೆ ನಡೆಸುತ್ತಿದ್ದೇವೆ. ಬಿಜೆಪಿ ಕಾರ್ಯಕರ್ತರು ನಮ್ಮ ಸರ್ಕಾರ ಮೇಲೆ ಒತ್ತಡ ಹೇರುತ್ತಿದ್ದಾರೆ. ಎಸ್ ಡಿಪಿಐ, ಪಿಎಫ್ಐ ಸಂಘಟನೆಯವರು ಅವರ ಸಮುದಾಯದ ಶಾಸಕರಾಗಿದ್ದ ತನ್ವೀರ್ ಸೇಠ್ ಮೇಲೆ ದಾಳಿ ಮಾಡಿದ್ದರು ಎಂದರು.

ಇದೊಂದು ಸಂಘಟಿತ ಸಂಚು: ಸರ್ಕಾರ ಈ ಪ್ರಕರಣವನ್ನು ಕೇವಲ ಕೊಲೆ ಎಂದು ನೋಡುತ್ತಿಲ್ಲ, ಇದೊಂದು ಸಂಘಟಿತ ಕೃತ್ಯ ಎಂದು ಗಂಭೀರವಾಗಿ ನೋಡುತ್ತಿದೆ. ಇನ್ನು ಕೆಲವು ದಿನ ಕಾದುನೋಡಿ ಎಲ್ಲ ಕ್ರಮ ಗೊತ್ತಾಗಲಿದೆ ಎಂದರು.

ರಾಜಕೀಯಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು, ಸಿದ್ದರಾಮಯ್ಯ ಹೇಳುವುದೆಲ್ಲ ವೇದವಾಕ್ಯವಲ್ಲ. ನಾವು ತೆಗೆದುಕೊಂಡ ಕ್ರಮಗಳು ಜನರ ಮುಂದಿವೆ. ಸಮಾಜಘಾತುಕ ಶಕ್ತಿಗಳಿಗೆ ಕೆಲವು ರಾಜಕೀಯ ಪ್ರೇರಣೆಯಿದೆ, ಕೇರಳದ ಗಡಿಯಿಂದ ಬಂದು ಕೃತ್ಯವೆಸಗುತ್ತಿದ್ದಾರೆ. ಇದರ ಹಿಂದೆ ಹಲವು ಆಯಾಮಗಳಿವೆ. ಅವುಗಳೆಲ್ಲವನ್ನೂ ಸಂಪೂರ್ಣವಾಗಿ ನಿಗ್ರಹಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

 ರಾಜಕೀಯ ದಿವಾಳಿತನ: ಎಸ್ ಡಿಪಿಐ, ಪಿಎಫ್ಐಯಂತಹ ಸಂಘಟನೆಗಳಿಗೆ ಬಿಜೆಪಿ ಹಣ ನೀಡುತ್ತಿದೆ ಎಂಬ ಕಾಂಗ್ರೆಸ್ ಹೇಳಿಕೆ ಅತ್ಯಂತ ಹಾಸ್ಯಾಸ್ಪದ ಮತ್ತು ರಾಜಕೀಯ ದಿವಾಳಿತನವಾಗಿದೆ. ಸರ್ಕಾರ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಈ ವಿಷಯದಲ್ಲಿ ಯಾವ ಸಚಿವರೂ ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ, ಸಮರ್ಥವಾಗಿ ಎದುರಿಸುತ್ತಿದ್ದೇವೆ, ಹಿಂದೆ ಬಿದ್ದಿಲ್ಲ ಕರಾವಳಿ ಜಿಲ್ಲೆಗೆ ಸದ್ಯಕ್ಕೆ ಮತ್ತೆ ಭೇಟಿ ಕೊಡುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com