'ಅಂದು ಗೋಕಾಕ್ ಚಳವಳಿ, ಇಂದು ಕುಪ್ಪಳ್ಳಿ ಕಹಳೆ': ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಗುಡುಗು
ರಾಜ್ಯ ಸರ್ಕಾರದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕುವೆಂಪು ಹುಟ್ಟೂರು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು ಸಂಗೀತ ನಿರ್ದೇಶಕ ಹಂಸಲೇಖ ಭಾಗಿಯಾಗಿ ಚಾಲನೆ ನೀಡಿದರು.
Published: 15th June 2022 02:12 PM | Last Updated: 15th June 2022 02:15 PM | A+A A-

ಸಂಗೀತ ನಿರ್ದೇಶಕ ಹಂಸಲೇಖ(ಸಂಗ್ರಹ ಚಿತ್ರ)
ಕುಪ್ಪಳ್ಳಿ (ತೀರ್ಥಹಳ್ಳಿ): ರಾಜ್ಯ ಸರ್ಕಾರದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕುವೆಂಪು ಹುಟ್ಟೂರು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು ಸಂಗೀತ ನಿರ್ದೇಶಕ ಹಂಸಲೇಖ ಭಾಗಿಯಾಗಿ ಚಾಲನೆ ನೀಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ ನಡೆದಿದ್ದು. ಸಾಹಿತಿಗಳು ಹಾಗೂ ವಿದ್ವಾಂಸರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ, ನಮಗೆ ಕನ್ನಡಕ್ಕೆ ಮಹಾಮನೆ ಕಲ್ಯಾಣದಲ್ಲಿ. ಕವಿಶೈಲದಲ್ಲಿ ಗುರುಮನೆ, ಈ ಗುರುಮನೆಯಿಂದ ಇವತ್ತು ನಾವು ಕಹಳೆಯನ್ನು ಊದುತ್ತಿದ್ದೇವೆ. ಅದು ಕುಪ್ಪಳ್ಳಿ ಕಹಳೆ. ಅವತ್ತು ಗೋಕಾಕ್ ಚಳವಳಿ, ಇವತ್ತು ಕುಪ್ಪಳ್ಳಿ ಕಹಳೆ. ಇದು ನಾಡಿನಾದ್ಯಂತ ಮೊಳಗಬೇಕು ಎಂದರು.
ಇದನ್ನೂ ಓದಿ: ಬರಗೂರು ರಾಮಚಂದ್ರಪ್ಪ ಸಮಿತಿ 'ತುಕಡೆ ತುಕಡೆ ಗ್ಯಾಂಗ್'ನ ಭಾಗ: ಶಿಕ್ಷಣ ಸಚಿವ ಬಿಸಿ ನಾಗೇಶ್
ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವು ಇಲ್ಲಿ ಇದ್ದು ಏನು ಮಾಡುವುದು, ಬಸವ, ಕುವೆಂಪು ಅಂದರೆ ಕರುನಾಡು, ಕನ್ನಡ, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೆ ಅವಮಾನವಾದ ಮೇಲೆ ನಾವು ಇಲ್ಲಿ ಇದ್ದು ಏನು ಮಾಡುವುದು, ನಮ್ಮ ನಾಡೇ ಒಂದು ಗೀತೆ, ನಮ್ಮ ನಾಡೇ ಧ್ವಜ, ಎರಡಕ್ಕೂ ಅವಮಾನವಾಗಿದೆ. ಕನ್ನಡದ ನಡ ಮುರಿಯುವ ನಡೆ ಕನ್ನಡನಾಡಿನಲ್ಲಿ ಶುರುವಾಗಿದೆ. ಇದಕ್ಕೆ ನಾವು ಹೋರಾಡುತ್ತೇವೆ, ನಾವು ಭಾಷಾಂಧರು ಅಂದರೂ ಸರಿ, ತಮಿಳು ನಾಡಿನಲ್ಲಿ ಅವರ ಭಾಷೆಗೆ ಕುತ್ತು ಬಂದಾಗ ಆಡಳಿತ ಪಕ್ಷ ವಿರೋಧ ಪಕ್ಷದವರೆಲ್ಲರೂ ಒಟ್ಟಾಗುತ್ತಾರೆ, ಅವರನ್ನು ನೋಡಿ ನಾವು ಕನ್ನಡಿಗರು ಕಲಿಯಬೇಕು ಎಂದರು.
ನಾವು ಯಾವುದೇ ಪಕ್ಷ ಅಲ್ಲ, ಕವಿ ಪಕ್ಷ, ಕನ್ನಡದ ಕುಪ್ಪಳ್ಳಿ ಕಹಳೆಯನ್ನು ಊದಿದ್ದೇವೆ ಎಂದರು.