ಹಾಸನ, ಕೊಡಗು, ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಂಪಿಸಿದ ಭೂಮಿ: ನಸುಕಿನ ಸವಿನಿದ್ದೆಯಲ್ಲಿದ್ದವರನ್ನು ಬಡಿದೆಪ್ಪಿಸಿದ ಭೂಕಂಪ
ಕಾಫಿನಾಡು ಕೊಡಗು ಜಿಲ್ಲೆಯ ಹಲವೆಡೆ ಮತ್ತು ಬಯಲುಸೀಮೆ ಹಾಸನದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸಿತು.
Published: 23rd June 2022 11:30 AM | Last Updated: 23rd June 2022 11:30 AM | A+A A-

ಸಾಂದರ್ಭಿಕ ಚಿತ್ರ
ಹಾಸನ/ಕೊಡಗು/ಮಂಡ್ಯ: ಕಾಫಿನಾಡು ಕೊಡಗು ಜಿಲ್ಲೆಯ ಹಲವೆಡೆ ಮತ್ತು ಬಯಲುಸೀಮೆ ಹಾಸನದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸಿತು.
ಹಾಸನದಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿದೆ. ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ ತಾಲ್ಲೂಕಿನ ಹಲವೆಡೆ ನಸುಕಿನ ಜಾವ 4.30ರಿಂದ 5 ಗಂಟೆಯ ಮಧ್ಯೆ ಭೂಮಿ ಕಂಪಿಸಿತು. ಮುಂಜಾನೆಯ ಸವಿ ನಿದ್ದೆಯಲ್ಲಿದ್ದ ಜನರು ಎಚ್ಚೆತ್ತು ಗಾಬರಿಗೊಂಡು ಮನೆಗಳಿಂದ ಹೊರಗೆ ಓಡಿ ಬಂದರು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪ ಸಂಭವಿಸಿರುವುದನ್ನು ಖಚಿತಪಡಿಸಿದ್ದಾರೆ. ಇಂದು ನಸುಕಿನ ಜಾವ 4.38ರ ಸುಮಾರಿಗೆ ಅಕರಲಗೂಡು, ಹೊಳೆನರಸೀಪುರ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿತು. ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿತ್ತು ಎಂದು ಕೇಂದ್ರವು ತಿಳಿಸಿದೆ.
ಕೊಡಗಿನಲ್ಲೂ ಕಂಪಿಸಿದ ಭೂಮಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮಗಳಲ್ಲಿ ಸಹ ಭೂಕಂಪನವುಂಟಾಗಿದೆ. ಮಡಿಕೇರಿ ನಗರ, ದೇವಸ್ತೂರು ಸೇರಿದಂತೆ ವಿವಿಧೆಡೆಗಳಲ್ಲಿ ನಸುಕಿನ ಜಾವ 4.37ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಮಂಡ್ಯ ಜಿಲ್ಲೆಯಲ್ಲಿಯೂ ಇಂದು ನಸುಕಿನ ಜಾವ 4.40ರ ಸುಮಾರಿಗೆ ಲಭು ಭೂಕಂಪನವಾಗಿದೆ. ಕೆ ಆರ್ ಪೇಟೆ ತಾಲ್ಲೂಕಿನ ಐಕನಹಳ್ಳಿ, ಚಿನ್ನೇನಹಳ್ಳಿ, ಮಾದಾಪುರ, ಗೊಂದಿಹಳ್ಳಿ, ಬಿದರಹಳ್ಳಿ, ಗೊಡೇಹೊಸಹಳ್ಳಿಯ ಗ್ರಾಮಗಳ ಜನರು ಭೂಕಂಪನದಿಂದ ಆತಂಕಕ್ಕೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.