1,428 ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ನೀಡಲು ಸರ್ಕಾರ ವಿಫಲ; ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್

ಹೈಕೋರ್ಟ್‌ನ ಕೋಪದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ 1,428 ಗ್ರಾಮಗಳಲ್ಲಿ ಸ್ಮಶಾನ ಭೂಮಿಗಾಗಿ ಭೂಮಿ ಹುಡುಕುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಹೈಕೋರ್ಟ್‌ನ ಕೋಪದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ 1,428 ಗ್ರಾಮಗಳಲ್ಲಿ ಸ್ಮಶಾನ ಭೂಮಿಗಾಗಿ ಭೂಮಿ ಹುಡುಕುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, 1,428 ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ನೀಡಲು ಸರ್ಕಾರ ವಿಫಲವಾದರೆ ಕಂದಾಯ ಇಲಾಖೆ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ವಿವರವಾದ ಮೆಮೊ ಸಲ್ಲಿಸಿ, ರಾಜ್ಯದಲ್ಲಿ ಒಟ್ಟು 29,076 ಗ್ರಾಮಗಳಿವೆ. ಅವುಗಳಲ್ಲಿ ಒಟ್ಟು 27,648 ಗ್ರಾಮಗಳಿಗೆ ಮತ್ತು 299 ಪಟ್ಟಣಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗಿದೆ. ಇನ್ನೂ 1,428 ಗ್ರಾಮಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕಿದೆ. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಜಮೀನಿನ ಅಗತ್ಯವಿದೆ ಎಂದು ಜಾಗ ನೀಡಲು ಕಂದಾಯ ಇಲಾಖೆಗೆ ಇರುವ ತೊಂದರೆಗಳನ್ನು ಕೋರ್ಟ್ ಗಮನಕ್ಕೆ ತಂದರು.

ರಾಜ್ಯದ ಹಲವು ಕಡೆ ಸ್ಮಶಾನಕ್ಕೆ ಜಾಗ ನೀಡಲು ಸರ್ಕಾರಿ ಜಮೀನು ಲಭ್ಯವಿಲ್ಲ. ಹಾಗಾಗಿ ಖಾಸಗಿಯವರ ಜಮೀನು ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಸ್ಮಶಾನಕ್ಕೆ ತಮ್ಮ ಭೂಮಿ ನೀಡಲು ಜನ ಮುಂದೆ ಬರುತ್ತಿಲ್ಲ. ಪ್ರತಿಯೊಂದು ಹಳ್ಳಿಯಲ್ಲೂ ವಿವಿಧ ಧರ್ಮ-ಜಾತಿಯ ಜನರು ತಮ್ಮದೇ ಆದ ವಿಭಿನ್ನ ಆಚರಣೆ ಮತ್ತು ಸಂಪ್ರದಾಯ ಹೊಂದಿದ್ದಾರೆ. ಇದರಿಂದ ಸ್ಮಶಾನಕ್ಕೆ ಜಾಗ ಒದಗಿಸಲು ಕಷ್ಟವಾಗಿದೆ. ಎರಡು ವರ್ಷ ಕಾಲಾವಕಾಶ ನೀಡಿದರೆ 1,428 ಗ್ರಾಮಗಳಿಗೆ ಮತ್ತು ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗುವುದು ಎಂದು ಸರ್ಕಾರಿ ವಕೀಲರು ಕೋರ್ಟ್​ಗೆ ಮನವಿ ಮಾಡಿದರು. 

ಇದಕ್ಕೆ ಒಪ್ಪದ ಕೋರ್ಟ್,  ಈ ಸಂಬಂಧ ಏಕ ಸದಸ್ಯ ಪೀಠವು ಆದೇಶ ಹೊರಡಿಸಿಯೇ ಮೂರು ವರ್ಷ ಕಳೆದಿವೆ. ಆದರೂ ಹೈಕೋರ್ಟ್ ಆದೇಶವನ್ನು ಇಲ್ಲಿಯವರೆಗೆ ಪಾಲಿಸಿಲ್ಲ. ಸರ್ಕಾರ ಈಗಲೂ ಕಣ್ತೆರೆದಿಲ್ಲ. ಹೈಕೋರ್ಟ್ ಮೌನವಾಗಿದ್ರೆ, ಸರ್ಕಾರ 20 ವರ್ಷವರೆಗೆ ಸಮಯ ಕೇಳುತ್ತದೆ. ಹಾಗಾಗಿ ಮುಂದಿನ ವಿಚಾರಣೆ ವೇಳೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಜೂನ್‌ 30ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com