ಪಶ್ಚಿಮ ಘಟ್ಟ ರಕ್ಷಣೆಗೆ 50 ವರ್ಷಗಳ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಜೀವ ವೈವಿಧ್ಯತೆಯ ತಾಣವಾಗಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಮುಂದಿನ 50 ವರ್ಷಗಳ ಕಾಲ ಅದರ ರಕ್ಷಣೆಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಮತ್ತು ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ಸುವರ್ಣ ಮಹೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಉಮೇಶ ಕತ್ತಿ, ಕಂದಾಯ ಸಚಿವ ಆರ್ ಅಶೋಕ, ಸಂಸದ ಪಿ ಸಿ ಮೋಹನ್, ಕೆಎಫ್‌ಡಿಸಿ ಅಧ್ಯಕ್ಷೆ ತಾರಾ ಅನುರಾಧ ಅವರೊಂದಿಗೆ ಸಿಎಂ ಬೊಮ್ಮಾಯಿ.
ವಿಧಾನಸೌಧದಲ್ಲಿ ಸುವರ್ಣ ಮಹೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಉಮೇಶ ಕತ್ತಿ, ಕಂದಾಯ ಸಚಿವ ಆರ್ ಅಶೋಕ, ಸಂಸದ ಪಿ ಸಿ ಮೋಹನ್, ಕೆಎಫ್‌ಡಿಸಿ ಅಧ್ಯಕ್ಷೆ ತಾರಾ ಅನುರಾಧ ಅವರೊಂದಿಗೆ ಸಿಎಂ ಬೊಮ್ಮಾಯಿ.

ಬೆಂಗಳೂರು: ಜೀವ ವೈವಿಧ್ಯತೆಯ ತಾಣವಾಗಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಮುಂದಿನ 50 ವರ್ಷಗಳ ಕಾಲ ಅದರ ರಕ್ಷಣೆಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಮತ್ತು ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಸೂಚನೆ ನೀಡಿದರು. 

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ನಿಗಮದ ಸುವರ್ಣ ಮಹೋತ್ಸವ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಶೇ 23 ರಷ್ಟಿರುವ ಅರಣ್ಯ ಪ್ರದೇಶವನ್ನು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಶೇ. 30ಕ್ಕೆ ಹೆಚ್ವಿಸಲು ಪ್ರಯತ್ನಿಸಿ ಎಂದು ಹೇಳಿದರು. 

ಈ ಹಿಂದೆ ಲಾಭ ಗಳಿಸಲು ಕಾಗದದ ಉದ್ಯಮಕ್ಕೆ ಕಚ್ಚಾ ವಸ್ತುವಾಗಿ ಬಳಸಲು ನೀಲಗಿರಿ ನೆಡಲಾಗಿತ್ತು. ನೀಲಗಿರಿ ಮರಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ, ಕಾಗದ ಮಾಡಲು ಬಳಕೆ ಮಾಡಲಾಗುತ್ತಿತ್ತು. ಅದರಿಂದ ಲಾಭವೂ ಆಗುತ್ತಿತ್ತು.ಆ ರೀತಿಯ ಲಾಭದ ಅವಶ್ಯಕತೆ ಇಲ್ಲ. ಅರಣ್ಯ ಬೆಳೆಸುವುದರ ಜೊತೆಗೆ ಅದರ ಚಕ್ರದಲ್ಲಿ ಅರಣ್ಯ ಉತ್ಪನ್ನಗಳನ್ನು ತಯಾರಿಸಲು ನೀಲಗಿರಿ, ಅಕೇಶಿಯಾ ಬಿಟ್ಟು, ಹೊಸ ತಳಿಗಳನ್ನು ಬೆಳೆಸಲು ಚಿಂತನೆ ಮಾಡಬೇಕು. ನೀಲಗಿರಿಯ ದುಷ್ಪರಿಣಾಮ ಭೂಮಿಯ ಮೇಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಅರಣ್ಯ ನಾಶವಾದಾಗಲೆಲ್ಲಾ ಮಾನವ ಜೀವನಕ್ಕೂ ಸಮಸ್ಯೆಗಳಿವೆ, ಆದ್ದರಿಂದ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕೆಎಫ್‌ಡಿಸಿಗೆ 100 ಕೋಟಿ ರೂ.ಗಳನ್ನು ನೀಡಲಾಗಿದ್ದು, ಇದನ್ನು ಸಮೀಕ್ಷೆ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕೆ ಬಳಸಿಕೊಳ್ಳಬೇಕು. ಸಮರ್ಪಕವಾಗಿ ಬಳಸಿಕೊಂಡರೆ ಇನ್ನೂ 100 ಕೋಟಿ ರೂ. ನೀಡಲು ಸರ್ಕಾರ ಸಿದ್ಧವಿದೆ. ಆದರೆ ಅರಣ್ಯ ಇಲಾಖೆ ಕೂಡ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಪ್ರಯತ್ನಗಳನ್ನು ತೆಗೆದುಕೊಳ್ಳಬೇಕು. ಮರಗಳು ಕಡಿಯದಂತೆ ನೋಡಿಕೊಳ್ಳಲು, ಹೆಚ್ಚಿನ ಕ್ರಮಗಳ ಕೈಗೊಳ್ಳಬೇಕು ಮತ್ತು ಬೆಳೆಯುವವರ ಮೇಲಿನ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ತಿಳಿಸಿದರು. 

15 ದಿನಗಳ ಕಾಲ ಅರಣ್ಯದಲ್ಲಿ ಇರಿ...
ಇದೇ ವೇಳೆ ತಿಂಗಳಿಗೆ ಕನಿಷ್ಠ 15 ದಿನ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದಲ್ಲಿ ಇರುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. 

ಮುಖ್ಯ ಕಾರ್ಯದರ್ಶಿ, ಅರಣ್ಯ ಕಾರ್ಯದರ್ಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಜಾಗೃತರಾಗಬೇಕು. ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. “ನೀವು ನಿಮ್ಮ ಕಚೇರಿಯಿಂದ ಹೊರಗೆ ಬರುತ್ತಿಲ್ಲ. ಕಾಡಿಗೆ ಹೋಗಿ, ತಿಂಗಳಿಗೆ 15 ದಿನ ಇರಿ. ಇದು ಇಲಾಖೆ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಹಿರಿಯ ಅಧಿಕಾರಿಗಳು ಅರಣ್ಯ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂಬ ಸಂದೇಶ ರವಾನೆಯಾಗಲಿದೆ, ಸಿಬ್ಬಂದಿಯ ಕಷ್ಟಗಳು, ಅವರ ಕಾರ್ಯವೈಖರಿಯ ವಾಸ್ತವತೆ ಅರಿಯಲು ಇದು ಸಹಕಾರಿಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com