ರಾಜ್ಯದಲ್ಲಿ ಜಿ-20 ಶೃಂಗ ಸಭೆ ಆಯೋಜನೆಗೆ ಸಹಕಾರ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ರಾಜ್ಯದಲ್ಲಿ ಜಿ-20 ರಾಷ್ಟ್ರಗಳ ಶೃಂಗ ಸಭೆಗಳನ್ನು ಆಯೋಜಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ - ಹರ್ಷ್ ವರ್ಧನ್ ಶ್ರಿಂಗ್ಲಾ
ಬಸವರಾಜ ಬೊಮ್ಮಾಯಿ - ಹರ್ಷ್ ವರ್ಧನ್ ಶ್ರಿಂಗ್ಲಾ

ಬೆಂಗಳೂರು: ರಾಜ್ಯದಲ್ಲಿ ಜಿ-20 ರಾಷ್ಟ್ರಗಳ ಶೃಂಗ ಸಭೆಗಳನ್ನು ಆಯೋಜಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತಿಳಿಸಿದ್ದಾರೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಜಿ-20 ಮುಖ್ಯ ಸಂಯೋಜಕ ಹರ್ಷ್ ವರ್ಧನ್ ಶ್ರಿಂಗ್ಲಾ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಭಾರತದಲ್ಲಿ ಇದೇ ಡಿಸೆಂಬರ್ ನಲ್ಲಿ ಜಿ-20 ಸಭೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರಿಂಗ್ಲಾ ಅವರು, ಜಿ-20 ದೇಶಗಳು ವಿಶ್ವದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದ್ದು, ಇದೀಗ ಮೊದಲ ಬಾರಿಗೆ ಭಾರತಕ್ಕೆ ಅಧ್ಯಕ್ಷತೆಯ ಅವಕಾಶ ಲಭಿಸಿದೆ. ಈ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ದೇಶದಾದ್ಯಂತ ಜಿ-20 ಸಭೆಗಳನ್ನು ಆಯೋಜಿಸಲು ಉದ್ದೇಶಿಸಿದೆ. ಅಂತೆಯೇ ಕರ್ನಾಟಕದಲ್ಲಿಯೂ ಸುಮಾರು 10 ಸಭೆಗಳನ್ನು ಆಯೋಜಿಸುವ ಚಿಂತನೆಯಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಹಾಗೂ ಸಲಹೆ ಅಗತ್ಯ ಎಂದು ನುಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಎಲ್ಲ ರಾಷ್ಟ್ರಗಳೊಂದಿಗೆ ಕರ್ನಾಟಕ ಒಂದಲ್ಲ ಒಂದು ರೀತಿಯಿಂದ ನಂಟು ಹೊಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಸಭೆಗಳನ್ನು ಆಯೋಜಿಸುವುದು ಅತ್ಯಂತ ಸೂಕ್ತವೆಂದು ಅಭಿಪ್ರಾಯಪಟ್ಟರು.

ಜಿ-20 ಅಧ್ಯಕ್ಷತೆ ದೊರಕಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದ್ದು, ಪ್ರಧಾನಿಯವರು ಪೂರ್ವ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತಕ್ಕೆ ವಿಶೇಷ ಸ್ಥಾನ ದೊರೆಯುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಆಯೋಜಿಸುವ ಸಭೆಗಳಲ್ಲಿ ರಾಜ್ಯದ ಆರ್ಥಿಕತೆ, ಔದ್ಯಮಿಕ ವಾತಾವರಣವನ್ನು ಜಿ-20 ದೇಶಗಳಿಗೆ ಮನವರಿಕೆ ಮಾಡುವಂತೆ ಸಲಹೆ ನೀಡಿದರು. ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಹೆಸರುವಾಸಿಯಾದ ರಾಜ್ಯವು ಅತಿ ಹೆಚ್ಚು ಸ್ಟಾರ್ಟಪ್ ಗಳನ್ನು ಹೊಂದಿದೆ. ಅತಿ ಹೆಚ್ಚು ಯುನಿಕಾರ್ನ್, ಡೆಕಾಕಾರ್ನ್ ಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಇದರೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯವು ಗ್ರೀನ್ ಹೈಡ್ರೋಜನ್ ಉತ್ಪಾದನೆ, ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com