ಕೊಡಗಿನಲ್ಲಿ ಲಘು ಭೂಕಂಪನ; ಒಂದು ವಾರದಲ್ಲಿ 3ನೇ ಬಾರಿ ಭೂಮಿ ನಡುಗಿದ ಅನುಭವ

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಲಘು ಭೂಕಂಪನ ಸಂಭವಿಸಿದ್ದು, ಇದು ವಾರದ ಅಂತರದಲ್ಲಿ ಸಂಭವಿಸಿದ 3ನೇ ಕಂಪನವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಲಘು ಭೂಕಂಪನ ಸಂಭವಿಸಿದ್ದು, ಇದು ವಾರದ ಅಂತರದಲ್ಲಿ ಸಂಭವಿಸಿದ 3ನೇ ಕಂಪನವಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಭೂಮಿ ಕಂಪಿಸಿದ್ದು, ಮಡಿಕೇರಿ, ನಾಪೋಕ್ಲು, ಕುಕ್ಕುಂದ, ಕಾಡು, ಬಲ್ಲಮಾವಟ್ಟಿ. ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ, ವನಚಲ್, ಕರಿಕೆ, ಚೆಯ್ಯಂಡಾಣೆ ಸೇರಿದಂತೆ ವಿವಿಧ ಕಡೆ 7.45 ಕ್ಕೆ ಭೂಮಿ ಕಂಪಿಸಿದೆ. ಮನೆಯಲ್ಲಿದ್ದ ಪಾತ್ರೆಗಳು, ವಸ್ತುಗಳು ಅಲುಗಾಡಿದ್ದು, ಭಯಭೀತರಾದ ಜನ ಕೆಲ ಕಾಲ ರಸ್ತೆಗೆ ಬಂದು ನಿಲ್ಲುವಂತಾಗಿತ್ತು. 

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, '5 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸಾಕಷ್ಟು ಕಡೆಗಳಿಂದ ಜನರು ಮಾಹಿತಿ ನೀಡಿದ್ದಾರೆ. ವಿಷಯವನ್ನು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಗಮನಕ್ಕೆ ತರಲಾಗಿದೆ‌. ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವ ದತ್ತಾಂಶಗಳ ಪರಿಶೀಲನೆ ನಡೆದಿದೆ. ಆ ಬಳಿಕ ಕಂಪನದ ತೀವ್ರತೆ ಗೊತ್ತಾಗಲಿದೆ. ಸದ್ಯಕ್ಕೆ ಜನರು ಆತಂಕಪಡುವ ಅಗತ್ಯ ಇಲ್ಲ' ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿರುವುದು ವಾರದಲ್ಲಿ ಇದು ಮೂರನೆ ಬಾರಿಯಾಗಿದೆ. 

ಸಿಸಿಟಿವಿ ದೃಶ್ಯ ವೈರಲ್
3.4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಮಂಗಳವಾರ ಸಂಪಾಜೆಯಲ್ಲಿ ಕಂಪಿಸಿದ ನಂತರ ನಾಯಿಯೊಂದು ಭಯಭೀತರಾಗಿರುವುದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಕಳೆದ ವರ್ಷವೂ ನೆರೆಯ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಭೂಕಂಪ ಸಂಭವಿಸಿತ್ತು. ಸಂಪಾಜೆಯಲ್ಲಿ ಸ್ಥಳೀಯರಿಗೂ ಕಂಪನ ಅನುಭವವಾಗಿದ್ದು, ಇದು 2.7 ತೀವ್ರತೆಯನ್ನು ಹೊಂದಿತ್ತು ಮತ್ತು ಭೂಕಂಪದ ಕೇಂದ್ರವು ಮಡಿಕೇರಿಯ ಕರಿಕೆ ಗ್ರಾಮ ಪಂಚಾಯಿತಿಯಿಂದ ವಾಯುವ್ಯಕ್ಕೆ 4.7 ಕಿಮೀ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com