‘ಪ್ರಸ್ತುತ ಪರಿಸ್ಥಿತಿ ರಾಜ್ಯಕ್ಕೆ ಅನುಕೂಲಕರವಾಗಿದೆ, ನಾವು ನಮ್ಮ ಮೇಲೆ ನಂಬಿಕೆ ಇಟ್ಟು ಮುನ್ನಡೆಯಬೇಕು’: ಸಿಎಂ ಬೊಮ್ಮಾಯಿ

ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಆರ್ಥಿಕ ಹಿಂಜರಿತದ ಮಧ್ಯೆ ಬೆಂಗಳೂರಿನಲ್ಲಿ ಕಳೆದ ಶುಕ್ರವಾರ ಮುಕ್ತಾಯಗೊಂಡ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಐಎಂ)ದಲ್ಲಿ ರಾಜ್ಯಕ್ಕೆ ನಿರೀಕ್ಷೆಗೂ ಮೀರಿ ಸುಮಾರು 10 ಲಕ್ಷ ಕೋಟಿ...
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಆರ್ಥಿಕ ಹಿಂಜರಿತದ ಮಧ್ಯೆ ಬೆಂಗಳೂರಿನಲ್ಲಿ ಕಳೆದ ಶುಕ್ರವಾರ ಮುಕ್ತಾಯಗೊಂಡ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಐಎಂ)ದಲ್ಲಿ ರಾಜ್ಯಕ್ಕೆ ನಿರೀಕ್ಷೆಗೂ ಮೀರಿ ಸುಮಾರು 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಕನ್ನಡಪ್ರಭ.ಕಾಮ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹೂಡಿಕೆಗಳನ್ನು ಬೆಂಗಳೂರಿನಿಂದ ಆಚೆಗೆ ಕೊಂಡೊಯ್ಯಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸಲು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತದ ಪ್ರವೃತ್ತಿಯ ಹೊರತಾಗಿಯೂ ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವಲ್ಲಿ ಜಿಮ್ ಯಶಸ್ವಿಯಾಯಿತೇ?
ಮುಖ್ಯವಾಗಿ ಜಿಮ್ ಒಂದು ಸಾಧನವಾಗಿದ್ದು, ಈ ಮೂಲಕ ವ್ಯಾಪಾರವನ್ನು ಅರ್ಥೈಸುವ ಮತ್ತು ಹೂಡಿಕೆ ಮಾಡಲು ಬಯಸುವ ಜನರಲ್ಲಿ ವಿಶ್ವಾಸವನ್ನು ತುಂಬಲಾಗುತ್ತದೆ. ವಿಶೇಷವಾಗಿ Covid-19 ನಂತರ, ಇಡೀ ಪ್ರಪಂಚದಲ್ಲಿ ಆರ್ಥಿಕ ಹಿಂಜರಿತ ಇದೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಅನೇಕ ದೇಶಗಳು ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ವಿರುದ್ಧ ಹೋರಾಡುತ್ತಿವೆ ಎಂದರು.

ಯಾವುದೇ ಪರಿಸ್ಥಿತಿಯಲ್ಲಿ, ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಹೂಡಿಕೆ ಮಾಡಲು ಒಂದು ನಿರ್ದಿಷ್ಟ ಪ್ರಮಾಣದ ಆಸಕ್ತಿ ಇರುತ್ತದೆ. ಸರ್ಕಾರವಾಗಿ, ನಾನು ಇದನ್ನು ಒಂದು ಅವಕಾಶವಾಗಿ ನೋಡುತ್ತೇನೆ.

ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹಲವು ದೇಶಗಳು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿವೆ. ಅವರು ತಮ್ಮ ದೇಶೀಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಇದು ಭಾರತಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ ಒಂದು ಅವಕಾಶ ಎಂದು ತಾವು ಭಾವಿಸುವುದಾಗಿ ಸಿಎಂ ತಿಳಿಸಿದರು.

ಹಲವು ದೇಶಗಳಲ್ಲಿನ ಆರ್ಥಿಕ ಹಿಂಜರಿತ ಪ್ರವೃತ್ತಿ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಿದೆಯೇ?
ಮೊದಲ ಬಾರಿಗೆ, ಅಭಿವೃದ್ಧಿ ಹೊಂದಿದ ದೇಶಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸಾಮಾನ್ಯವಾಗಿ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈಗ, ವಿವಿಧ ಕಾರಣಗಳಿಗಾಗಿ ಚೀನಾ ಹೂಡಿಕೆಯನ್ನು ಆಕರ್ಷಿಸುತ್ತಿಲ್ಲ. ಜಾಗತಿಕ ಮುಗ್ಗಟ್ಟು ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಇದು ಒಂದು ನಿರ್ದಿಷ್ಟ ಪ್ರಮಾಣದ ಅವಕಾಶವನ್ನು ತರುತ್ತಿದೆ ಎಂದರು.

ಈ ಹೂಡಿಕೆಗಳು ಜನರಿಗೆ ಹೇಗೆ ಸಹಾಯ ಮಾಡುತ್ತವೆ?
ಜಿಮ್ ನ ಸಂಪೂರ್ಣ ಗುರಿಯು ಎರಡರಿಂದ ಮೂರು ಕ್ಷೇತ್ರಗಳನ್ನು ಒಳಗೊಂಡಿತ್ತು. ಆರ್ಥಿಕ ಚಟುವಟಿಕೆಗೆ ದೊಡ್ಡ ರೀತಿಯಲ್ಲಿ ಉತ್ತೇಜನ ನೀಡಲು ಮತ್ತು ಈ ಹೂಡಿಕೆಗಳ ಮೂಲಕ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಾವು ಬಯಸುತ್ತೇವೆ. ಉದ್ಯೋಗ ಸೃಷ್ಟಿಸಬಹುದಾದ ಹೂಡಿಕೆಗಳು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದರು.

ಬೆಂಗಳೂರನ್ನು ಮೀರಿ ಇತರ ಜಿಲ್ಲೆಗಳಿಗೆ ಹೂಡಿಕೆಯನ್ನು ಕೊಂಡೊಯ್ಯುವ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ?
ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ರಾಯಚೂರು, ಮಂಗಳೂರು, ಮೈಸೂರು ಮತ್ತಿತರ ಕಡೆ ಹೂಡಿಕೆದಾರರು ಆಸಕ್ತಿ ತೋರಿಸುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಕಂಪನಿಗಳು ಬರುವಂತೆ ಒತ್ತಾಯಿಸುತ್ತಿದ್ದು, ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಉದಾಹರಣೆಗೆ, ಧಾರವಾಡದ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಕ್ಲಸ್ಟರ್‌ನಲ್ಲಿ ಯಾವುದೇ ರಾಜ್ಯ ನೀಡದಂತಹ ರಿಯಾಯಿತಿಗಳನ್ನು ನಾವು ನೀಡುತ್ತಿದ್ದೇವೆ ಎಂದರು.

ಪ್ರಸ್ತಾವಿತ ಮಸೂದೆಯು ಹೆಚ್ಚಿನ ಕನ್ನಡಿಗರಿಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆಯೇ?
ಈ ಹಿಂದೆ ಗ್ರೂಪ್ ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ನೀತಿ ಇತ್ತು. ನಾವು ಎಲ್ಲಾ ಕ್ಷೇತ್ರಗಳಲ್ಲಿ ಗ್ರೂಪ್ ಬಿ, ಸಿ ಮತ್ತು ಡಿ ಗುಂಪಿನಲ್ಲಿ ಮೀಸಲಾತಿ ನೀಡುವ ಬಗ್ಗೆ ಚಿಂತಿಸುತ್ತಿದ್ದೇವೆ ಮತ್ತು ಅದಕ್ಕಾಗಿ ನಾವು ಕನ್ನಡಿಗರನ್ನು ಸಿದ್ಧಪಡಿಸುತ್ತೇವೆ. ಕೌಶಲ್ಯ ಅಭಿವೃದ್ಧಿಗಾಗಿ ನಾವು ಸಮಗ್ರ ನೀತಿಯನ್ನು ಸಹ ತರುತ್ತಿದ್ದೇವೆ ಎಂದರು.

ನಿಮ್ಮ ನೇತೃತ್ವದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. 2023ರ ಚುನಾವಣೆಯ ನಂತರ ನೀವು ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ಇದೆಯೇ?
ಉಪಚುನಾವಣೆಗಳು ವಿಭಿನ್ನ ವಿಷಯಗಳ ಮೇಲೆ ನಡೆಯುತ್ತವೆ. ಹೆಚ್ಚಾಗಿ ಸ್ಥಳೀಯ ಸಮಸ್ಯೆಗಳು ಮತ್ತು ಎಲ್ಲಾ ಸಿಎಂಗಳು ಉಪಚುನಾವಣೆಯಲ್ಲಿ ಸೋತಿದ್ದಾರೆ. ನನ್ನ ರಾಜಕೀಯ ನಾಯಕತ್ವದ ಮಟ್ಟಿಗೆ ವಿಧಾನಸಭೆ ಚುನಾವಣೆಯೇ ಅಗ್ನಿ ಪರೀಕ್ಷೆ. ನನ್ನ ಪಕ್ಷವನ್ನು ನಾನು ಮತ್ತೆ ಅಧಿಕಾರಕ್ಕೆ ತರುತ್ತೇನೆ (2023 ರ ವಿಧಾನಸಭಾ ಚುನಾವಣೆಯಲ್ಲಿ) ಎಂಬ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ ಎಂದರು.

ನಿಮ್ಮ ಜನಸಂಕಲ್ಪ ಯಾತ್ರೆಗೆ ಜನರ ಪ್ರತಿಕ್ರಿಯೆ ಹೇಗಿದೆ?
ಉತ್ತರ ಪ್ರತಿಕ್ರಿಯೆ ಇದೆ. ನಾವು ವಿವಿಧ ವಿಷಯಗಳ ಮೇಲೆ ಹೋರಾಡುತ್ತಿದ್ದೇವೆ. ಇದು ಕೇವಲ ರಾಜಕೀಯಕ್ಕಾಗಿ ಅಲ್ಲ. ನಾವು ಅಭಿವೃದ್ಧಿ ಕಾರ್ಯಸೂಚಿ, ಸಾಮಾಜಿಕ ಸಮಾನತೆ ಮತ್ತು ಕಾರ್ಯಕ್ಷಮತೆಯನ್ನು ಜನರ ಮುಂದಿಡುತ್ತಿದ್ದೇವೆ ಮತ್ತು ಜನರು ಅದಕ್ಕೆ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಅದು ಮುಂದಿನ ವಿಧಾನಸಭೆ ಚುನಾವಣೆಗೆ ಮುನ್ನುಡಿಯಾಗಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಮುಂದಿನ ಕೆಲವು ತಿಂಗಳುಗಳಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ಪ್ರಮುಖ ನಿರ್ಧಾರಗಳು ಏನು?
ಬಜೆಟ್‌ನಲ್ಲಿ ಘೋಷಿಸಲಾದ ಸುಮಾರು ಶೇ. 95 ರಷ್ಟು ಯೋಜನೆಗಳಿಗೆ ನಾವು ಈಗಾಗಲೇ ಆದೇಶ ಹೊರಡಿಸಿದ್ದೇವೆ.  ತಕ್ಷಣವೇ ಅತ್ಯಗತ್ಯವಾದ ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಈ ತಿಂಗಳು ಮತ್ತು ಮುಂದಿನ ತಿಂಗಳು ಕೆಲವು ಯೋಜನೆಗಳನ್ನು ಪ್ರಾರಂಭಿಸುತ್ತೇವೆ. ನನ್ನ ಬಜೆಟ್ ಪ್ರಸ್ತಾವನೆಗಳು ಅನುಷ್ಠಾನಗೊಂಡು ಜನರಿಗೆ ತಲುಪಬೇಕು ಎಂದು ಬಯಸುವುದಾಗಿ ತಿಳಿಸಿದರು.

ಇದು ಒಂದು ಭಾಗ; ಎರಡನೆಯದು ಮುಂದಿನ 3-4 ತಿಂಗಳಲ್ಲಿ ಮುಂದಿನ ಬಜೆಟ್ ಕೂಡ ಬರಲಿದೆ. ಮುಂದಿನ ಬಜೆಟ್‌ಗೆ ಸಿದ್ಧತೆಯೂ ಆರಂಭವಾಗಲಿದೆ. ಏಕಕಾಲದಲ್ಲಿ, ನಾವು ಆ ಎರಡೂ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಒಬ್ಬ ಮುಖ್ಯಮಂತ್ರಿಯಾಗಿ ನೀವು ಯಾವ ಹೆಜ್ಜೆಗುರುತು ಬಿಡಲು ಬಯಸುತ್ತೀರಿ?
ಪ್ರತಿಯೊಬ್ಬ ಸಿಎಂ ಸಹ ತಮ್ಮ ಹೆಜ್ಜೆಗುರುತುಗಳನ್ನು ಬಿಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ನಾನು ಸಹ ಕೆಲವು ಹೆಜ್ಜೆಗುರುತುಗಳನ್ನು ಬಿಡಲು ಬಯಸುತ್ತೇನೆ. ಕೆಲವು ಸಿಎಂಗಳು ವಿವಿಧ ವಿಷಯಗಳ ಬಗ್ಗೆ ತೆಗೆದುಕೊಂಡ ನೀತಿ ಅಥವಾ ಸಾರ್ವಜನಿಕ ನಿಲುವಿನಿಂದ ನೆನಪಿಸಿಕೊಳ್ಳುತ್ತಾರೆ. ಉದಾಹರಣೆಗೆ, ರಾಮಕೃಷ್ಣ ಹೆಗಡೆಯವರು ಅಧಿಕಾರ ವಿಕೇಂದ್ರೀಕರಣಕ್ಕಾಗಿ ನೆನಪಿಸಿಕೊಳ್ಳುತ್ತಾರೆ, ಆದರೂ ಇತರ ವಿಷಯಗಳಿವೆ. ಕೆಲವರು ತಮ್ಮ ಕಾರ್ಯಕ್ರಮಗಳಿಂದಾಗಿ ನೆನಪಾಗುತ್ತಾರೆ ಎಂದರು.

ಬಿಎಸ್ ಯಡಿಯೂರಪ್ಪ ಅವರು "ಭಾಗ್ಯಲಕ್ಷ್ಮಿ" ಯೋಜನೆಯಿಂದಾಗಿ ನೆನಪಾಗುತ್ತಾರೆ. ನೀವು ದೀರ್ಘಕಾಲೀನ ಪರಿಣಾಮವನ್ನು ಹೊಂದಲು ಬಯಸಿದರೆ, ಮುಖ್ಯವಾಗಿ ನೀವು ತುಂಬಾ ಪ್ರಗತಿಪರ ಎಂದು ತೋರಿಸಬೇಕು. ಆದರೆ ಅದೇ ಸಮಯದಲ್ಲಿ, ಆ ಪ್ರಗತಿಯನ್ನು ಸರಿಯಾದ ರೀತಿಯಲ್ಲಿ ಸಾಧಿಸಬೇಕು ಮತ್ತು ನ್ಯಾಯಯುತ ರೀತಿಯಲ್ಲಿ ವಿತರಿಸಬೇಕು. ಆದ್ದರಿಂದ, ನಾನು ಆಡಳಿತದಲ್ಲಿ ಸುಧಾರಕನಾಗಲು ಬಯಸುತ್ತೇನೆ. ನನ್ನನ್ನು ಸಮಾಜ ಸುಧಾರಕ ಎಂದು ನೆನಪಿಸಿಕೊಳ್ಳಬೇಕು. ನಾನು ಸುಧಾರಣಾವಾದಿ ಎಂದು ನೆನಪಿಸಿಕೊಳ್ಳಲು ಬಯಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com