ಕಾಂಗ್ರೆಸ್‌, ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧ ಆದೇಶ ತೆರವು: ಹೈಕೋರ್ಟ್‌

ಕೆಜಿಎಫ್‌-2 ಚಿತ್ರದ ಮ್ಯೂಸಿಕ್ ಅನ್ನು ಟ್ವಿಟರ್‌ ಖಾತೆಯಲ್ಲಿ ಬಳಕೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್‌, ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧಿಸುವ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ತೆರವು ಮಾಡಿದೆ.
ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ
ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ
Updated on

ಬೆಂಗಳೂರು: ಕೆಜಿಎಫ್‌-2 ಚಿತ್ರದ ಮ್ಯೂಸಿಕ್ ಅನ್ನು ಟ್ವಿಟರ್‌ ಖಾತೆಯಲ್ಲಿ ಬಳಕೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್‌, ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧಿಸುವ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ತೆರವು ಮಾಡಿದೆ.

ಕೆಜಿಎಫ್‌-2 ಚಿತ್ರದ ಮ್ಯೂಸಿಕ್ ಅನ್ನು ಟ್ವಿಟರ್‌ ಖಾತೆಯಲ್ಲಿ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಮತ್ತು ಭಾರತ ಐಕ್ಯತಾ ಯಾತ್ರೆಯ (ಭಾರತ್‌ ಜೋಡೋ ಯಾತ್ರಾ) ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್‌ಗೆ ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಬದಿಗೆ ಸರಿಸಿದೆ.

ಬೆಂಗಳೂರಿನ 85ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ಪಿ ಎನ್‌ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ. "ಮೇಲ್ಮನವಿದಾರರಾದ ಕಾಂಗ್ರೆಸ್‌ ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೃತಿಸ್ವಾಮ್ಯ ಉಲ್ಲಂಘಿಸಿರುವ ವಿಷಯಗಳನ್ನು ತೆಗೆದು ಹಾಕಬೇಕು ಎಂಬ ಷರತ್ತಿಗೆ ಒಳಪಟ್ಟು ಆಕ್ಷೇಪಾರ್ಹವಾದ ಆದೇಶವನ್ನು (ವಾಣಿಜ್ಯ ನ್ಯಾಯಾಲಯದ) ಬದಿಗೆ ಸರಿಸಲಾಗಿದೆ“ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ಕೃತಿಸ್ವಾಮ್ಯ ಮಾಡಲಾದ ವಿಚಾರವನ್ನು ತಪ್ಪಾಗಿ ಟ್ವೀಟ್‌ ಮಾಡಲಾಗಿದ್ದು, ಆ ಟ್ವೀಟ್‌ಗಳನ್ನು ನಾಳೆ ಮಧ್ಯಾಹ್ನ ತೆಗೆಯಲಾಗುವುದು ಎಂದು ಕಾಂಗ್ರೆಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ನೀಡಿದ ಭರವಸೆಯನ್ನು ದಾಖಲಿಸಿಕೊಂಡು ಪೀಠವು ಈ ಆದೇಶ ಮಾಡಿತು. ಭರವಸೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಟ್ವಿಟರ್‌ ಖಾತೆ ನಿರ್ಬಂಧಿಸುವ ಅಗತ್ಯವಿಲ್ಲ ಎಂದು ಪೀಠ ಹೇಳಿತು.

“ಖಾತೆ ನಿರ್ಬಂಧ ಕ್ರಮವು ದಂಡ ಸ್ವರೂಪದ್ದಾಗಿದೆ. ಸಾಕ್ಷ್ಯ ಸಂಗ್ರಹಿಸಲು ನಿರ್ದೇಶಿಸಿರುವುದು ಸರಿಯಾಗಿದೆ. ಕಾಂಗ್ರೆಸ್‌ ಭರವಸೆಗೆ ಒಳಪಟ್ಟು ಸದ್ಯಕ್ಕೆ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಲಾಗಿದೆ. ಇತರೆ ಮಧ್ಯಂತರ ಅರ್ಜಿಗಳನ್ನು ಪುನಃ ಪರಿಗಣಿಸಲಾಗುವುದು” ಎಂದೂ ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅಧೀನ ನ್ಯಾಯಾಲಯವು “ಕೆಜಿಎಫ್‌ – 2 ಸಿನಿಮಾದ ಮುದ್ರಿತ ಸಂಗೀತವನ್ನು ಕಾನೂನುಬಾಹಿರವಾಗಿ ಕಾಂಗ್ರೆಸ್‌ ಮತ್ತು ಭಾರತ ಐಕ್ಯತಾ ಯಾತ್ರೆಯಲ್ಲಿ ಬಳಕೆ ಮಾಡಿರುವುದಕ್ಕೆ ಪ್ರೋತ್ಸಾಹ ನೀಡಿದರೆ ಫಿರ್ಯಾದಿಗೆ ಸರಿಪಡಿಸಲಾರದಷ್ಟು ಹಾನಿಯಾಗಲಿದೆ. ವಿಸ್ತೃತ ನೆಲೆಯಲ್ಲಿ ಇದು ಕೃತಿಚೌರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ” ಎಂದು ಕೋರ್ಟ್ ಆದೇಶದಲ್ಲಿ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ಪ್ರತಿಬಂಧಕಾದೇಶ ಮಾಡಿದ್ದ ಅಧೀನ ನ್ಯಾಯಾಲಯವು ಫಿರ್ಯಾದಿಯು ಕೃತಿಸ್ವಾಮ್ಯ ಹೊಂದಿರುವ ಮುದ್ರಿತ ಸಂಗೀತವನ್ನು ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಪ್ರತಿವಾದಿಗಳು ಬಳಕೆ ಮಾಡಬಾರದು ಎಂದು ನಿರ್ಬಂಧಿಸಿತ್ತು. ಅಲ್ಲದೇ, ಕೃತಿ ಸ್ವಾಮ್ಯ ಉಲ್ಲಂಘಿಸಿರುವ ಮೂರು ಲಿಂಕ್‌ಗಳನ್ನು ತನ್ನ ವೇದಿಕೆಯಿಂದ ತೆಗೆಯುವಂತೆ ಟ್ವಿಟರ್‌ಗೆ ಆದೇಶಿಸಿ, ಐಎನ್‌ಸಿ ಮತ್ತು ಭಾರತ ಐಕ್ಯತಾ ಯಾತ್ರೆಯ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com