ಮೈಸೂರು: ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಕೊಲೆ; ಇಬ್ಬರು ಆರೋಪಿಗಳ ಬಂಧನ

ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಎನ್.ಆರ್. ಕುಲಕರ್ಣಿ ಅವರ ಹತ್ಯೆ ಪ್ರಕರಣವನ್ನು ಭೇದಿಸಿರುವ ನಗರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಎನ್.ಆರ್. ಕುಲಕರ್ಣಿ ಅವರ ಹತ್ಯೆ ಪ್ರಕರಣವನ್ನು ಭೇದಿಸಿರುವ ನಗರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತ ಕುಲಕರ್ಣಿ ಅವರ ನೆರೆ ಮನೆ ನಿವಾಸಿ ಮಾದಪ್ಪ ಎಂಬುವರ ಪುತ್ರ, ಎಂಬಿಎ ಪದವೀಧರ ಮನು (30), ಈತನ ಸ್ನೇಹಿತ ವರುಣ್(30) ಬಂಧಿತರು.

ಜಾಗದ ವಿಚಾರವಾಗಿ ಸೇಡಿನಿಂದ ಕುಲಕರ್ಣಿ ಅವರನ್ನು ಹತ್ಯೆ ಮಾಡಲಾಗಿದ್ದು, ಆರೋಪಿಗಳು ಅಪಘಾತವಾದಂತೆ ಬಿಂಬಿಸಿದ್ದರು ಎಂದು ಮಂಗಳವಾರ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕುಲಕರ್ಣಿ ಅವರ ಮನೆಗೆ ಹೊಂದಿಕೊಂಡಂತೆ ಇರುವ ಜಾಗಕ್ಕೆ ಸಂಬಂಧಿಸಿದಂತೆ ಮೂರ‌್ನಾಲ್ಕು ವರ್ಷಗಳಿಂದ ಇದ್ದ ವೈಷಮ್ಯವೇ ಕೊಲೆಗೆ ಕಾರಣ. ನ. 4ರಂದು ಸಂಜೆ ಮಾನಸಗಂಗೋತ್ರಿ ಆವರಣದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಕುಲಕರ್ಣಿ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆಸಿ ಅಪಘಾತ ಎಂಬಂತೆ ಬಿಂಬಿಸಲಾಗಿತ್ತು ಎಂದು ಹೇಳಿದರು.

ಪ್ರಾಥಮಿಕ ವರದಿಯಲ್ಲಿ ಇದೊಂದು ಅಪಘಾತ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಕುಲಕರ್ಣಿ ಅವರಿಗೆ ವಾಹನ ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿದೆ ಎಂದು ಮೃತರ ಅಳಿಯ ಮತ್ತು ಮಗಳು ದೂರು ನೀಡಿದ್ದರಿಂದ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ತನಿಖೆ ನಡೆಸಲಾಯಿತು. ಸಮೀಪವಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಾರಿನ ನಂಬರ್ ಪ್ಲೇಟ್ ತೆಗೆದು ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದು, ಹತ್ಯೆ ಮಾಡಿರುವುದು ಕಂಡುಬಂದಿತ್ತು ಎಂದು ವಿವರಿಸಿದರು.

ಮನು ಕಾರು ಚಾಲನೆ ಮಾಡಿದ್ದು, ಅದಕ್ಕೆ ವರುಣ್ ಸಹಕರಿಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿದೆ. ಕೃತ್ಯಕ್ಕೆ ಬಳಸಿದ ಕಾರಿನ ನಂಬರ್ ಪ್ಲೇಟ್ ತೆಗೆದಿದ್ದರಿಂದ ಕಾರನ್ನು ಪತ್ತೆ ಮಾಡುವುದು ಸವಾಲಾಗಿತ್ತು. ಸಿಸಿ ಕ್ಯಾಮರಾ ಫುಟೇಜ್ ಆಧಾರದಲ್ಲಿ ಕಾರನ್ನು ಪತ್ತೆ ಹಚ್ಚಲಾಗಿತ್ತು. ಕಾರಿನ ಮೂಲ ಹುಡುಕಾಟ ನಡೆಸಿದಾಗ ಮನು ಸ್ನೇಹಿತ ರಘು ಎಂಬಾತ ಕಾರನ್ನು ಮಾರಾಟ ಮಾಡಿಕೊಡುವಂತೆ ಕೊಟ್ಟಿದ್ದ. ಅದೇ ಕಾರನ್ನು ಮನು ಕೃತ್ಯಕ್ಕೆ ಬಳಸಿಕೊಂಡಿದ್ದಾನೆ ಎಂದು ವಿವರಿಸಿದರು.

ಅಪಘಾತದ ರೀತಿ ಕೊಲೆ ಮಾಡಬೇಕು ಎನ್ನುವ ಉದ್ದೇಶದಿಂದ ಕುಲಕರ್ಣಿ ಅವರನ್ನು ಆರೋಪಿಗಳು ಹಿಂಬಾಲಿಸಿ ಅವರ ಚಲನವಲನ, ಯಾವ ಸಮಯದಲ್ಲಿ ವಾಯುವಿಹಾರಕ್ಕೆ ಬರುತ್ತಾರೆ, ಎಲ್ಲಿ ಹೆಚ್ಚು ಓಡಾಡುತ್ತಾರೆ, ಯಾವ ಸ್ಥಳದಲ್ಲಿ ಜನದಟ್ಟಣೆ ಇಲ್ಲ ಎನ್ನುವುದನ್ನು ಆರೋಪಿಗಳು ಕುಲಕರ್ಣಿ ಅವರಿಗೆ ತಿಳಿಯದಂತೆ ಹಿಂಬಾಲಿಸಿ ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಕಮೀಷನರ್ ತಿಳಿಸಿದರು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡಕ್ಕೆ 50 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಎಸಿಪಿ ಶಿವಶಂಕರ್, ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com