3-4 ದಿನ ಟೈಮ್, ಇಲ್ಲ ನಾನೇ JCB ತಂದು ಗುಂಬಜ್ ಮಾದರಿ ಬಸ್ ನಿಲ್ದಾಣ ಹೊಡೆದುಹಾಕುತ್ತೇನೆ; ಸಂಸದ ಪ್ರತಾಪ್ ಸಿಂಹ

ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ಮಾಡಿದರೇ ತಾವೇ ಅಂತಹ ನಿಲ್ದಾಣಗಳನ್ನು ಹೊಡೆದು ಹಾಕುತ್ತೇವೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮತ್ತು ವಿವಾದಿತ ಬಸ್ ನಿಲ್ದಾಣ
ಸಂಸದ ಪ್ರತಾಪ್ ಸಿಂಹ ಮತ್ತು ವಿವಾದಿತ ಬಸ್ ನಿಲ್ದಾಣ

ಮೈಸೂರು: ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ಮಾಡಿದರೇ ತಾವೇ ಅಂತಹ ನಿಲ್ದಾಣಗಳನ್ನು ಹೊಡೆದು ಹಾಕುತ್ತೇವೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನವೆಂಬರ್ 13 ಅಂದರೆ ನಿನ್ನೆ ಮೈಸೂರಿನ ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕದ ವೇಳೆ ಸಂಸದ ಪ್ರತಾಪ್ ಸಿಂಹ ಮಾಡಿದ್ದ ಭಾಷಣ ವೈರಲ್ ಆಗಿದ್ದು, ಭಾಷಣದಲ್ಲಿ ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಿಸಿದರೆ ಒಡೆದು ಹಾಕುವುದು ನಿಶ್ಚಿತ ಎಂದು ಹೇಳಿದ್ದಾರೆ. 

'ಬಸ್​ ನಿಲ್ದಾಣಗಳ ಮೇಲೆ ಗುಂಬಜ್​​ ಇರುವುದನ್ನ ಗಮನಿಸಿದ್ದೇನೆ. ಅಂತಹ ಗುಂಬಜ್ ಇರುವ ಬಸ್​ ನಿಲ್ದಾಣ ತೆರವಿಗೆ ಹೇಳಿದ್ದೇನೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಹಾಗೂ ಅಕ್ಕ ಪಕ್ಕ ಚಿಕ್ಕ ಗುಂಬಜ್ ಗಳಿದ್ರೆ ಅದು ಮಸೀದಿನೇ. ಕೆಆರ್ ಐಡಿಎಲ್ ಇಂಜಿನಿಯರ್ ಗಳಿಗೆ 3-4 ದಿನದಲ್ಲಿ ಗುಂಬಜ್​ ತೆರವುಗೊಳಿಸಲು ಸೂಚಿಸಿದ್ದೇನೆ. ಇಲ್ಲವಾದರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೂ ಒಡೆಯರ್‌ ಹೆಸರು
ಇದೇ ವೇಳೆ ಈಗಾಗಲೇ ರೈಲೊಂದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ನಾಮಕರಣ ಮಾಡಿದಂತೆ, ಮೈಸೂರು ವಿಮಾನ ನಿಲ್ದಾಣಕ್ಕೂ ಅವರ ಹೆಸರಿಡಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಯ ಒಡೆಯರ್‌ ಹೆಸರಿಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದಷ್ಟೇ ಬಾಕಿ ಇದೆ ಎಂದರು.

ಜಾಫರ್ ಷರೀಫ್ ವಿರುದ್ಧ ಆಕ್ರೋಶ
ಇದೇ ಭಾಷಣದಲ್ಲಿ ಜಾಫರ್ ಷರೀಪ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಎಸ್ ನಿಜಲಿಂಗಪ್ಪನವರ ಕಾರ್ ಡ್ರೈವರ್ ಆಗಿದ್ದ ಜಾಫರ್ ಶರೀಫ್, ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿಸಿದ್ರು. ಕಳ್ಳ ಕಿವಿ ಇಟ್ಟುಕೊಂಡು ಇಂದಿರಾಗಾಂಧಿ ಬಳಿ ಹೋಗಿ ಮಾಹಿತಿ ಕೊಟ್ಟು ಲೋಕಸಭಾ ಚುನಾವಣಾಗೆ ಟಿಕೆಟ್ ಗಿಟಿಸಿಕೊಂಡು ಗೆದ್ದು ರೈಲ್ವೆ ಸಚಿವರಾಗಿದ್ದವರು. 1980 ರಲ್ಲಿ ಟಿಪ್ಪು ಎಕ್ಸ್‌ಪ್ರೆಸ್‌ ಪ್ರಾರಂಭ ಮಾಡುತ್ತಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಇಲಾಖೆಯಲ್ಲಿ ರೈಲಿನ ಹೆಸರು ಬದಲಾಯಿಸಿದ್ದೇನೆ. ನಾಲ್ಕು ವರ್ಷ ಸತತ ಪ್ರಯತ್ನ ಮಾಡಿ ಹೆಸರು ಬದಲಾವಣೆ ಮಾಡಿದ್ದೇನೆ. ಮೈಸೂರಿನ‌ ಪ್ರತಿಯೊಂದು ಸಂಕೇತವೂ ಮಹಾರಾಜರ ಕೊಡುಗೆ. ರೈಲ್ವೆ ಸ್ಟೇಷನ್ ಗೆ ಚಾಮರಾಜ ಒಡೆಯರ್ ಹೆಸರು ಇಡುತ್ತೇವೆ ಹೊರತು ಟಿಪ್ಪುವಿನ ಯಾವ ಗುರುತುಗಳು ಸಿಗದ ಹಾಗೇ ಮಾಡುತ್ತೇವೆ ಎಂದು ಭಾಷಣದಲ್ಲಿ ಗುಡುಗಿದ್ದಾರೆ.

ಟಿಪ್ಪು ಯಾವ ಹುಲಿ ಕೊಂದ?
ನಾವು ಶಾಲೆಯಲ್ಲಿ ಟಿಪ್ಪು ಸುಲ್ತಾನ್‌ ಮೈಸೂರು ಹುಲಿ ಎಂದು ಓದಿಕೊಂಡು ಬಂದೆವು. ಯಾವ ಹುಲಿ ಕೊಂದ ಎಂದು ಪ್ರಶ್ನಿಸಲಿಲ್ಲ. ಏಕಾಂಕಿಯಾಗಿ, ಬರಿಗೈಯಲ್ಲಿ ಕೊಲ್ಲುವುದು ಹೇಗೆ ಸಾಧ್ಯ ಎಂದು ಇದೇ ವೇಳೆ ಪ್ರಶ್ನಿಸಿದರು. ಹಿಂದಿ ಏರಿಕೆ ಎಂದು ಹೋರಾಟ ನಡೆಸುವ ಕನ್ನಡಪರ ಹೋರಾಟಗಾರರು ನಿಜವಾದ ಕನ್ನಡ ಪದ ಬಿಟ್ಟು ಪರ್ಷಿಯನ್‌ ತುಂಬಿದ ಟಿಪ್ಪು ವಿರುದ್ಧ ಯಾಕೆ ಹೋರಾಟ ಮಾಡುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ಅನೇಕ ಸಂಶೋಧನೆ ನಡೆಸಿದ್ದೇನೆ ಎಂದಿದ್ದ ಸಂಶೋಧಕ ಕಲಬುರ್ಗಿ ಅವರು ಟಿಪ್ಪುವಿನ ಕನ್ನಡ ವಿರೋಧಿತನವನ್ನು ಏಕೆ ಸಂಶೋಧನೆ ಮಾಡಲಿಲ್ಲ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಕೆ.ಆರ್‌.ಕ್ಷೇತ್ರದಲ್ಲಿ ಗುಂಬಜ್‌ ರೀತಿ ನಿರ್ಮಿಸಿರುವ ಬಸ್‌ ಶೆಲ್ಟರ್‌ಗಳನ್ನು ನಿಗದಿತ ಅವಧಿಯೊಳಗೆ ತೆಗೆಯದಿದ್ದರೆ ನಾನೇ ಬುಲ್ಡೋಜರ್‌ ತೆಗೆದುಕೊಂಡು ಹೋಗಿ ತೆಗೆಯುತ್ತೇನೆ ಎಂದು ಎಚ್ಚರಿಸಿದರು.

ಟಿಪ್ಪು ವೀರನಲ್ಲ. ಅವನು ಯಾವ ಯುದ್ಧದಲ್ಲೂ ಹೋರಾಡಿಲ್ಲ. ಯಾವ ಯುದ್ಧವನ್ನೂ ಗೆಲ್ಲಲಿಲ್ಲ. ಅಂಥವನು ಹೇಗೆ ಸುಲ್ತಾನ ಆಗಲು ಸಾಧ್ಯ? ಅವನು ಬರಿಗೈಯಲ್ಲಿ ಹುಲಿಯ ಜತೆ ಸೆಣಸಿ ಬದುಕಲು ಸಾಧ್ಯವಿಲ್ಲ. ಅವನು ಯಾವಾಗ ಹುಲಿಯ ಜೊತೆ ಹೋರಾಡಿದ್ದ? ಹೊಯ್ಸಳ ಕೂಡ ಹುಲಿಯನ್ನು ಮಣಿಸಿದ್ದು ಭರ್ಜಿಯಿಂದ ಎಂದು ಹೇಳಿದರು.

ಭಾಷಣದ ವಿಡಿಯೋ ವೈರಲ್ ಬೆನ್ನಲ್ಲೇ ನಿಲ್ದಾಣದ ಚಿತ್ರಣವೇ ಬದಲು
ನಿಲ್ದಾಣ ಹೊಡೆಯುವ ಪ್ರತಾಪ್ ಸಿಂಹ ಅವರ ಭಾಷಣ ವೈರಲ್ ಆಗುತ್ತಿದ್ದಂತೆಯೇ ಇತ್ತ ರಾತ್ರೋ ರಾತ್ರಿ ಬಸ್ ಶೆಲ್ಟರ್ ಮಾದರಿಯೇ ಬದಲಾಗಿದೆ.  ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಬಸ್ ಶೆಲ್ಟರ್ ಬದಲಾಗಿದ್ದು, ಇದೀಗ ಬಸ್ ಶೆಲ್ಟರ್ ಗುಂಬಜ್ ಮೇಲೆ ಕಳಶದಂತಹ ವಸ್ತುವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಶಾಸಕ ಎಸ್​ಎ ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಸ್​ ನಿಲ್ದಾಣದ ಶೆಲ್ಟರ್​ನಲ್ಲಿ ಮೂರು ಗುಂಬಜ್‌ಗಳ ಮೇಲೆ ಕಳಸ ಮಾದರಿಯ ಆಕೃತಿ ನಿರ್ಮಾಣ ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com