ಗಗನಮುಖಿಯಾದ ಮೆಣಸಿನಕಾಯಿ ಬೆಲೆ: ಕಳ್ಳರಿಂದ ರಕ್ಷಿಸಲು ಕೊರೆಯುವ ಚಳಿ ಲೆಕ್ಕಿಸದೆ ಬೆಳೆ ಕಾಯುತ್ತಿರುವ ರೈತರು!
ಗದಗ: ಸತತ ಮಳೆಯಿಂದ ರಾಜ್ಯಾದ್ಯಂತ ರೈತರು ನಷ್ಟ ಅನುಭವಿಸಿದ್ದಾರೆ, ಆದರೆ ಗದಗ ಮಾರುಕಟ್ಟೆಯಲ್ಲಿ ಈ ವರ್ಷ ಕ್ವಿಂಟಲ್‌ಗೆ 45,000 ರೂ.ಗೆ ಸಿಗುತ್ತಿರುವುದರಿಂದ ಮೆಣಸಿನಕಾಯಿ ಬೆಳೆಗಾರರು ಸಂತಸಗೊಂಡಿದ್ದಾರೆ.
ಹೆಚ್ಚಿನ ಬೆಲೆಯೊಂದಿಗೆ ಕಳ್ಳತನದ ಭೀತಿ ಬಂದಿದ್ದು, ರೈತರು ಈಗ ತಮ್ಮ ಬೆಲೆಬಾಳುವ ಸರಕುಗಳನ್ನು ರಕ್ಷಿಸಲು ತಮ್ಮ ಹೊಲಗಳ ಬಳಿ ಮೊಕ್ಕಾಂ ಹೂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕ್ವಿಂಟಲ್‌ಗೆ 25,000 ರೂ.ಗೆ ತಲುಪಿದ್ದ ಬೆಲೆ ಈ ವರ್ಷ ದುಪ್ಪಟ್ಟಾಗಿದೆ. ಮೆಣಸಿನಕಾಯಿ ಕಳ್ಳತನದ ಸಾಧ್ಯತೆ ಎಷ್ಟು ಗಂಭೀರವಾಗಿದೆಯೆಂದರೆ, ಗ್ರಾಮ ಪಂಚಾಯಿತಿಗಳು ತಮ್ಮ ಬೆಳೆಗಳಿಗೆ ರೈತರೇ ಜವಾಬ್ದಾರರು ಎಂದು ಡಂಗುರ ಸಾರಿಸಿದ್ದಾರೆ. ಬೆಳೆಗಾರರು ತಮ್ಮ ಜಮೀನಿನ ಬಳಿ ಟೆಂಟ್‌ಗಳನ್ನು ಹಾಕಿದ್ದಾರೆ ಮತ್ತು ಚಳಿಗಾಲದ ರಾತ್ರಿಗಳನ್ನು ಲೆಕ್ಕಿಸದೇ ಮೆಣಸಿನಕಾಯಿಯನ್ನು ಕಾಯುತ್ತಿದ್ದಾರೆ.
ನವೆಂಬರ್‌ನಲ್ಲಿಯೇ ಬೆಲೆ ಏರಿಕೆಯಾಗಿರುವುದು ಸಂತಸದ ಸುದ್ದಿಯಾಗಿದೆ ಎಂದು ರೈತರೊಬ್ಬರು ತಿಳಿಸಿದರು. ನಾವೆಲ್ಲ ಈಗ ಹಗಲು ರಾತ್ರಿ ಬೆಳೆಯನ್ನು ಕಾವಲು ಕಾಯುತ್ತಿದ್ದು, ಬೆಳೆ ಮಾರುವವರೆಗೂ ನಮ್ಮ ಜಮೀನಿನಲ್ಲೇ ಇರುತ್ತೇವೆ. ರೋಣ ತಾಲೂಕಿನ ಮೂವರು ರೈತರು 1 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ಕಳೆದುಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಈ ವರ್ಷ ಅತಿವೃಷ್ಟಿಯಿಂದ ಸಾಕಷ್ಟು ರೈತರು ಮೆಣಸಿನಕಾಯಿ ಬೆಳೆ ಕಳೆದುಕೊಂಡಿದ್ದಾರೆ. ಉಳಿದಿರುವ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯುತ್ತಿದೆ. ಈಗಾಗಲೇ ನಮ್ಮ ಹೊಲಗಳಲ್ಲಿ ಒಣಗಲು ಬೆಳೆ ಹಾಕಿದ್ದೇವೆ. ಆದರೆ, ನಮ್ಮದೇ ಗ್ರಾಮದವರೇ ಆದ ಕೆಲ ಕಿಡಿಗೇಡಿಗಳು ರಾತ್ರಿ ವೇಳೆ ಬೆಳೆಯನ್ನು ಕದಿಯುತ್ತಿದ್ದಾರೆ ಎಂದು ಮೆಣಸಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹೇಳಿದ್ದಾರೆ.
ನಾವು ಜಾಗರೂಕರಾಗಿರಲು ತಂಡವನ್ನು ರಚಿಸಿದ್ದೇವೆ, ನಮ್ಮ ಅಧಿಕಾರಿಗಳು ರಾತ್ರಿಯಲ್ಲಿ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡುತ್ತಾರೆ ಎಂದು ರೋಣ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ