ತುಮಕೂರಿನಲ್ಲಿ ಶೀಘ್ರದಲ್ಲೇ 'ಮಹಿಳಾ ಅಕ್ರಮ ವಲಸಿಗರ' ಬಂಧನ ಕೇಂದ್ರ ಆರಂಭ: ಪ್ರವೀಣ್ ಸೂದ್

ಅಪರಾಧ ಎಸಗಿದ ಮತ್ತು ಕಾನೂನು ದಾಖಲೆಗಳಿಲ್ಲದೆ ದೇಶದಲ್ಲಿ ಅಕ್ರಮವಾಗಿ ಉಳಿದುಕೊಂಡ ವಿದೇಶಿ ಮಹಿಳೆಯರಿಗೆ ಇದೇ ಮೊದಲ ಬಾರಿಗೆ ವಿಶೇಷವಾದ ಬಂಧನ ಕೇಂದ್ರ ಶೀಘ್ರದಲ್ಲೇ ತುಮಕೂರಿನಲ್ಲಿ ಆರಂಭಗೊಳ್ಳಲಿದ್ದು, ಇದು ರಾಜ್ಯದ ಮೂರನೇ ಬಂಧನ ಕೇಂದ್ರವಾಗಲಿದೆ.
ಪ್ರವೀಣ್ ಸೂದ್
ಪ್ರವೀಣ್ ಸೂದ್

ಬೆಂಗಳೂರು: ಅಪರಾಧ ಎಸಗಿದ ಮತ್ತು ಕಾನೂನು ದಾಖಲೆಗಳಿಲ್ಲದೆ ದೇಶದಲ್ಲಿ ಅಕ್ರಮವಾಗಿ ಉಳಿದುಕೊಂಡ ವಿದೇಶಿ ಮಹಿಳೆಯರಿಗೆ ಇದೇ ಮೊದಲ ಬಾರಿಗೆ ವಿಶೇಷವಾದ ಬಂಧನ ಕೇಂದ್ರ ಶೀಘ್ರದಲ್ಲೇ ತುಮಕೂರಿನಲ್ಲಿ ಆರಂಭಗೊಳ್ಳಲಿದ್ದು, ಇದು ರಾಜ್ಯದ ಮೂರನೇ ಬಂಧನ ಕೇಂದ್ರವಾಗಲಿದೆ.

ಮಾದಕವಸ್ತು ಕಳ್ಳಸಾಗಣೆ ಮತ್ತು ಸೈಬರ್ ಅಪರಾಧಗಳಂತಹ ಅಪರಾಧಗಳಲ್ಲಿ ಭಾಗಿಯಾಗಿರುವ ಅಕ್ರಮ ವಲಸಿಗರ ವಿರುದ್ಧ ರಾಜ್ಯ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ, ಕಳೆದ ಎರಡು ವರ್ಷಗಳಲ್ಲಿ ರಾಜ್ಯದಿಂದ ಗಡೀಪಾರು ಮಾಡುವವರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

“ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಗಡೀಪಾರು ಮಾಡಿದವರ ಸಂಖ್ಯೆ ಕಳೆದ 30 ವರ್ಷಗಳಲ್ಲಿನ ಸಂಖ್ಯೆಗಳಿಗಿಂತ ಹೆಚ್ಚಾಗಿದೆ. ನೆಲಮಂಗಲದಲ್ಲಿ ಈಗಿರುವ ಬಂಧನ ಕೇಂದ್ರ ತುಂಬಿ ಹೋಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಕೇಂದ್ರದ ಅವಶ್ಯಕತೆ ಹೆಚ್ಚಾಗಿತ್ತು. ಹೊರ ದೇಶಗಳ ಮಹಿಳೆಯರು ಅತಿಯಾಗಿ ಉಳಿದುಕೊಂಡು ಅಪರಾಧ ಎಸಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ತುಮಕೂರಿನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಂಧನ ಕೇಂದ್ರವನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರವೀಣ್ ಸೂದ್ ಅವರು ತಿಳಿಸಿದರು.

ಹೆಚ್ಚಿನ ಮಹಿಳೆಯರು ಆಫ್ರಿಕಾ ಮತ್ತು ಬಾಂಗ್ಲಾದೇಶದಿಂದ ಬಂದವರಾಗಿದ್ದಾರೆ. "ಆಫ್ರಿಕಾದ ಮಹಿಳೆಯರ ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧಗಳು, ವೇಶ್ಯಾವಾಟಿಕೆ, ಅಕ್ರಮ ತಂಗುವಿಕೆ ಮತ್ತು ಅತಿಯಾಗಿ ಉಳಿದುಕೊಂಡಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

2020 ರಲ್ಲಿ ಬೆಂಗಳೂರಿನಿಂದ ಸುಮಾರು 40 ಕಿಮೀ ದೂರದಲ್ಲಿರುವ ನೆಲಮಂಗಲದ ಬಳಿಯ ಸೊಂಡೆಕೊಪ್ಪ ಗ್ರಾಮದಲ್ಲಿ ಮೊದಲ ಬಂಧನ ಕೇಂದ್ರವನ್ನು ಸ್ಥಾಪಿಸಲಾಯಿತು. ಕೈದಿಗಳ ಸಾಂದ್ರತೆಯು ಹೆಚ್ಚಾದಾಗ ಅದೇ ಆವರಣದಲ್ಲಿ ಎರಡನೆಯ ಕೇಂದ್ರವನ್ನೂ ಆರಂಭಿಸಲಾಯಿತು. ಇದೀಗ ಅಪರಾಧಗಳಲ್ಲಿ ತೊಡಗಿಕೊಂಡ ವಿದೇಶಿ ಮಹಿಳೆಯರ ಬಂಧನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಮಹಿಳೆಯರ ಬಂಧನಕ್ಕಾಗಿ ವಿಶೇಷ ಬಂಧನ ಕೇಂದ್ರವನ್ನು ರಾಜ್ಯ ಪೊಲೀಸ್ ಇಲಾಖೆ ಆರಂಭಿಸುತ್ತಿದೆ.

ಆಗಸ್ಟ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಪ್ರವೀಣ್ ಸೂದ್ ಸೇರಿದಂತೆ ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳು ಬಂಧನ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲು ಸಭೆ ನಡೆಸಿದರು. ಇದರಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಮಹಿಳೆಯರಿಗಾಗಿ ವಿಶೇಷ ಬಂಧನ ಕೇಂದ್ರವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com