ಮತದಾರರ ಮಾಹಿತಿ ಕಳವು ಪ್ರಕರಣ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಶನಿವಾರ ದೂರು ನೀಡಿದೆ.
ಚುನಾವಣಾ ಆಯೋಗ ಕಚೇರಿ ಬಳಿ ನಿಂತಿರುವ ಕಾಂಗ್ರೆಸ್ ನಾಯಕರು.
ಚುನಾವಣಾ ಆಯೋಗ ಕಚೇರಿ ಬಳಿ ನಿಂತಿರುವ ಕಾಂಗ್ರೆಸ್ ನಾಯಕರು.

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಶನಿವಾರ ದೂರು ನೀಡಿದೆ.

ಕೆ.ಆರ್.ಸರ್ಕಲ್ ಬಳಿರುವ ಚುನಾವಣಾ ಆಯೋಗದ ಕಚೇರಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರೆ ಕಾಂಗ್ರೆಸ್ ನಾಯಕರು ದೂರು ನೀಡಿದರು.

ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರ ನಿಯೋಗ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ನೀಡಿತು.

ದೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಚಿಲುಮೆ ಸಂಸ್ಥೆಯ ಮುಖ್ಯಸ್ಥರಾದ ರವಿಕುಮಾರ್, ಕೃಷ್ಣಪ್ಪ, ಸಮೀಕ್ಷಾ ಆ್ಯಪ್ನ ಮಾಲೀಕರು ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ಹನಿ ಟ್ರಾಪ್ ಹನಿಗಳು ಸಿಎಂ ಕಛೇರಿಯಲ್ಲಿ ಸಿಕ್ಕಿಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿಯವರು ಮಾತಾಡಬೇಕು. ಬಿಜೆಪಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂಬ ಆರೋಪಗಳು ಬಂದಿವೆ, ಈ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶವೇನು? ಇಂತಹ ಟ್ರಾಪ್‌ಗಳಿಂದ ಬೊಮ್ಮಾಯಿಯವರನ್ನು ಪಪ್ಪೆಟ್ ಸಿಎಂ ರೀತಿ ಆಟ ಆಡಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದೆ.

ಮತದಾರರ ಮಾಹಿತಿ ಕಳ್ಳತನ ಪ್ರಕರಣದಲ್ಲಿ ಸರ್ಕಾರ ಕಳ್ಳಾಟದ ಹೇಳಿಕೆ ನೀಡುತ್ತಾ ದಿಕ್ಕುತಪ್ಪಿಸುತ್ತಿದೆ. ಚಿಲುಮೆ ಸಂಸ್ಥೆಯ ಅಕ್ರಮ ಬೆಳಕಿಗೆ ಬಂದಿರುವುದಕ್ಕೂ, ಮತದಾರ ಪಟ್ಟಿಯಲ್ಲಿ ಮತದಾರರ ಹೆಸರು ಕಾಣೆಯಾಗಿರುವುದಕ್ಕೂ ಸಂಬಂಧವಿರುವುದು ನಿಶ್ಚಿತ. ಸಿಎಂ ಬೊಮ್ಮೀಯವರು  ಅವರು ಉಡಾಫೆ ಉತ್ತರ ಕೊಟ್ಟು ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಹೇಳಿದೆ.

ಚಿಲುಮೆ ಸಂಸ್ಥೆ ಮತಪಟ್ಟಿ ಅಕ್ರಮ ಮಾಡಿದೆ ಎಂಬ ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಮತದಾನ ಜಾಗೃತಿ ಹೆಸರಿನಲ್ಲಿ ಮತದಾರರ ಖಾಸಗಿ ಮಾಹಿತಿಗಳಿಗೆ ಸಂಸ್ಥೆ ಕನ್ನ ಹಾಕಿದ್ದು, ಇದನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎನ್ನುವುದು ಕಾಂಗ್ರೆಸ್ ಆರೋಪವಾಗಿದೆ.

ಈ ಸಂಬಂಧ ಈಗಾಗಲೇ ಚಿಲುಮೆ ಸಂಸ್ಥೆಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದ್ದು, ಶುಕ್ರವಾರ ನಾಲ್ವರ ಬಂಧನವನ್ನೂ ನಡೆಸಲಾಗಿದೆ. ಅಲ್ಲದೆ ಚುನಾವಣಾ ಆಯೋಗ ಕೂಡಾ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಆದರೆ, ಮತಪಟ್ಟಿ ಹಗರಣದ ರುವಾರಿಗಳನ್ನು ರಕ್ಷಣೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಯತ್ನಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಈ ನಡುವೆ ಚಿಲುಮೆ ಸಂಸ್ಥೆಯ ಅಕ್ರಮ ಬಯಲಿಗೆ ಬಂದ ಬೆನ್ನಲ್ಲೇ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರನ್ನು ಅಕ್ರಮವಾಗಿ ಡಿಲೀಟ್ ಮಾಡಿರುವ ಆರೋಪ ಕೇಳಿಬಂದಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರ ಹೆಸರನ್ನೇ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಇನ್ನು 2016ರಲ್ಲಿ ಮೃತಪಟ್ಟವರ ಹೆಸರು ಇನ್ನೂ ಪಟ್ಟಿಯಲ್ಲಿ ಇಡಲಾಗಿದೆ ಎಂದು ಆರ್‌.ಆರ್‌. ನಗರದ ನಗರ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com