ಮಂಗಳೂರು ಸ್ಫೋಟ ಪ್ರಕರಣ: ಬಾಂಬ್ ತಯಾರಿಸುತ್ತಿರುವ ವಿಡಿಯೋಗಳನ್ನು ಐಸಿಸ್ ಸಹಚರರೊಂದಿಗೆ ಹಂಚಿಕೊಂಡಿದ್ದ ಶಾರಿಕ್!

ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಇಟ್ಟು ಬ್ಲಾಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರಿಕ್‌ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೈಸೂರಿನಲ್ಲಿ ವಾಸಿಸುತ್ತಿದ್ದ.
ಆರೋಪಿ ಮೊಹಮದ್ ಶಾರಿಖ್
ಆರೋಪಿ ಮೊಹಮದ್ ಶಾರಿಖ್

ಶಿವಮೊಗ್ಗ: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಇಟ್ಟು ಬ್ಲಾಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರಿಕ್‌ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೈಸೂರಿನಲ್ಲಿ ವಾಸಿಸುತ್ತಿದ್ದ.

ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್‌ನಲ್ಲಿ ನಡೆಸಿದ ತನಿಖೆಯ ಪ್ರಕಾರ, ಟೆಲಿಗ್ರಾಮ್‌ನಲ್ಲಿರುವ ಐಸಿಸ್‌ನ ಅಧಿಕೃತ ಮಾಧ್ಯಮ ಕೇಂದ್ರ ಅಲ್-ಹಯಾತ್‌ನ ಸದಸ್ಯರಾಗಿದ್ದ ತನ್ನ ಇಬ್ಬರು ಸಹಚರರಿಗೆ ಬಾಂಬ್ ತಯಾರಿಕೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ದಾಖಲೆಗಳನ್ನು ಶಾರಿಕ್ ಕಳುಹಿಸುತ್ತಿದ್ದ ಎಂಬ ಸತ್ಯ ಬಹಿರಂಗವಾಗಿದೆ.

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿ ಇರಿದ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಪ್ರಮುಖ ಆರೋಪಿ ಜಬೀವುಲ್ಲಾ ಸೇರಿದಂತೆ ನಾಲ್ವರನ್ನು ಬಂಧಿಸಿ ಯುಎಪಿಎ ಹಾಕಿದ್ದರು. ತನಿಖೆಯ ಸಂದರ್ಭದಲ್ಲಿ, ಶಾರಿಕ್‌ಗೆ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ಎಂಬ ಇಬ್ಬರು ಸಹಚರರು ಇದ್ದಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಶಾರಿಕ್ ಮತ್ತು ಮಾಜ್ 2020 ರ ಮಂಗಳೂರಿನ ಗೋಡೆ ಮೇಲೆ ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಶಿವಮೊಗ್ಗದ ಚೂರಿ ಇರಿತ ಘಟನೆಯ ತನಿಖೆ ನಡೆಸಿದ ದೊಡ್ಡಪೇಟೆ ಪೊಲೀಸರು, ಐಸಿಸ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಮತ್ತು ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಸಂಚು ರೂಪಿಸಲಾಗಿದೆ ಎಂದು ಕಂಡುಹಿಡಿದಿದ್ದಾರೆ. ಆರೋಪಿಗಳು ಸಾರ್ವಜನಿಕ ಆಸ್ತಿ ಮತ್ತು ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಫೋಟಕಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ತಿಳಿದು ಬಂದಿದೆ. ರಾಷ್ಟ್ರಧ್ವಜ ಸುಟ್ಟ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸೆ.19ರಂದು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಶಾರಿಕ್ ಪ್ರಮುಖ ಆರೋಪಿಯಾಗಿದ್ದರೆ, ಮಾಜ್ ಮತ್ತು ಯಾಸೀನ್ ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯಾಗಿದ್. ಯಾಸೀನ್ ಮಾಜ್ ಮತ್ತು ಶಾರಿಕ್  ಭೇಟಿಯಾದಾಗಲೆಲ್ಲಾ ಜಿಹಾದ್‌ನ ಮೂಲಭೂತ ವಿಚಾರಗಳು ಮತ್ತು ಪರಿಕಲ್ಪನೆಗಳನ್ನು ಚರ್ಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟೆಲಿಗ್ರಾಮ್, ಸಿಗ್ನಲ್, ಇನ್‌ಸ್ಟಾಗ್ರಾಮ್, ವೈರ್, ಎಲಿಮೆಂಟ್ ಮುಂತಾದ ಮೆಸೆಂಜರ್ ಆ್ಯಪ್‌ಗಳ ಮೂಲಕ ಶಾರಿಕ್ ಉಗ್ರವಾದ, ಮೂಲಭೂತವಾದ, ಐಸಿಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಕೆಲಸಗಳಿಗೆ ಸಂಬಂಧಿಸಿದ ಪಿಡಿಎಫ್ ಫೈಲ್‌ಗಳು, ವಿಡಿಯೋ ಮತ್ತು ಆಡಿಯೋ ಮತ್ತು ಲಿಂಕ್‌ಗಳನ್ನು ಯಾಸಿನ್‌ಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.

ಬಾಂಬ್‌ಗಳನ್ನು ತಯಾರಿಸುವ ಪರಿಕಲ್ಪನೆಯ ಬಗ್ಗೆ  ಶಾರಿಕ್ ಹಂಚಿಕೊಂಡ ಪಿಡಿಎಫ್ ಫೈಲ್‌ಗಳು ಮತ್ತು ವೀಡಿಯೊಗಳಲ್ಲಿ ತಿಳಿದುಕೊಂಡ ನಂತರ ಇಬ್ಬರು ಆರೋಪಿಗಳು ಇ-ಕಾಮರ್ಸ್ ಸೈಟ್ ಮತ್ತು ಬ್ಯಾಟರಿಗಳು, ಸ್ವಿಚ್‌ಗಳು, ವೈರ್‌ಗಳು, ಮ್ಯಾಚ್‌ಬಾಕ್ಸ್‌ಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಬಾಂಬ್ ತಯಾರಿಸಲು ಬೇಕಾದ ಟೈಮರ್ ರಿಲೇ ಸರ್ಕ್ಯೂಟ್‌ಗಳನ್ನು ವಮೊಗ್ಗದಲ್ಲಿ ಖರೀದಿಸಿದ್ದರು.

ಶಿವಮೊಗ್ಗದ ತುಂಗಾ ನದಿ ದಡದಲ್ಲಿರುವ  ಕೆಮ್ಮನಗುಂಡಿ ಎಂಬ ಸ್ಥಳದಲ್ಲಿ ಆರೋಪಿಗಳು ತಯಾರಿಸಿದ್ದ ಬಾಂಬ್ ಅನ್ನು ಪ್ರಾಯೋಗಿಕವಾಗಿ ಸ್ಫೋಟಿಸಿದ್ದು,  ಅದು ಯಶಸ್ವಿಯಾಗಿದೆ. ಅವರು ಸ್ಫೋಟಕಗಳನ್ನು ಕೂಡ ಸಂಗ್ರಹಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ, ಬಾಂಬ್ ಪರೀಕ್ಷೆಯ ಸ್ಥಳದ ಬಳಿ ರಾಷ್ಟ್ರಧ್ವಜವನ್ನು ಸುಡಲಾಯಿತು. ಅದನ್ನು  ವೀಡಿಯೊ ಚಿತ್ರೀಕರಿಸಲಾಯಿತು. ಬಾಂಬ್ ತಯಾರಿಸಲು ಬೇಕಾದ ಹಣವನ್ನು ಯಾಸಿನ್‌ಗೆ ಕ್ರಿಪ್ಟೋಕರೆನ್ಸಿ ಮೂಲಕ ಶಾರಿಕ್ ಕಳುಹಿಸಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ಶಾರಿಕ್ ಈಗ ಆಸ್ಪತ್ರೆಗೆ ದಾಖಲಾಗಿದ್ದರೆ, ಮಾಜ್ ಮತ್ತು ಯಾಸೀನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com