ಮಂಗಳೂರು ಸ್ಫೋಟದಿಂದ ಪಾಠ ಕಲಿಯಿರಿ, ಆಧಾರ್ ಕಾರ್ಡ್ ಕಳೆದುಹೋದರೆ ಲಾಕ್ ಮತ್ತು ಅನ್ಲಾಕ್ ವ್ಯವಸ್ಥೆ ಬಳಸಿಕೊಳ್ಳಿ: ಎಡಿಜಿಪಿ ಅಲೋಕ್ ಕುಮಾರ್
ಮಂಗಳೂರು ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ ಎಂದು ಹೇಳಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಜನತೆಗೆ ಕೆಲ ಎಚ್ಚರಿಕೆಗಳನ್ನು ನೀಡಿದ್ದಾರೆ.
Published: 23rd November 2022 12:32 PM | Last Updated: 23rd November 2022 02:54 PM | A+A A-

ಎಡಿಜಿಪಿ ಅಲೋಕ್ ಕುಮಾರ್
ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ ಎಂದು ಹೇಳಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಜನತೆಗೆ ಕೆಲ ಎಚ್ಚರಿಕೆಗಳನ್ನು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಂಗಳೂರು ಸ್ಫೋಟ ಪ್ರಕರಣದಿಂದ ಪಾಠ ಕಲಿಯಬೇಕಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ ಬಹಳ ಎಚ್ಚರ ವಹಿಸಬೇಕು. ಆಧಾರ್ ಸಂಖ್ಯೆ ನೀಡುವ ವಿಶಿಷ್ಟ ಗುರುತು ಪ್ರಾಧಿಕಾರ ವೆಬ್ಸೈಟ್ನಲ್ಲಿ ಲಭ್ಯವಿರುವ ಲಾಕ್ ಮತ್ತು ಅನ್ಲಾಕ್ ಮಾಡುವ ವ್ಯವಸ್ಥೆಯನ್ನು ಬಳಕೆ ಮಾಡುವಂತೆ ಸಲಹೆ ನೀಡಿದ್ದಾರೆ.
ಅಲ್ಲದೆ, ಮನೆಗಳನ್ನು ಬಾಡಿಗೆ ನೀಡುವ ಮಾಲೀಕರಿಗೂ ಎಚ್ಚರಿಕೆಗಳನ್ನು ನೀಡಿದ್ದಾರೆ. ಮನೆಗಳನ್ನು ಬಾಡಿಗೆಗೆ ಕೊಡುವಾಗಲೂ ಬಾಡಿಗೆಗೆ ಬರುವ ವ್ಯಕ್ತಿಗಳ ವಿವರಗಳನ್ನು ಮಾಲೀಕರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮನೆಯ ಅಕ್ಕಪಕ್ಕ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿರಬೇಕು ಎಂದು ಹೇಳಿದ್ದಾರೆ.
Learnings from Mangalore blast case-
— alok kumar (@alokkumar6994) November 22, 2022
- Plz be careful if you lose your Aadhaar card
Use Lock & Unlock facility available on UIDAI site to prevent its misuse
- Plz verify antecedents of tenants before renting it out
- Effective neighbourhood watch system to be in place pic.twitter.com/xcy5ehtykU
ಆಧಾರ್ ವಿವರಗಳನ್ನು ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ...
ವಿಶಿಷ್ಟ ಗುರುತು ಪ್ರಾಧಿಕಾರದ UIDAI ವೆಬ್ಸೈಟ್ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ, ನಿಮ್ಮ ಗುರುತು ದೃಢೀಕರಿಸಿದ ನಂತರ ನಿಮ್ಮ ಆಧಾರ್ ವಿವರಗಳನ್ನು ಲಾಕ್ ಮಾಡಲು ಅವಕಾಶವಿದೆ. ಹೀಗೆ ಆಧಾರ್ ದತ್ತಾಂಶ ಲಾಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಯಾರೂ ಯಾವುದೇ ಮಾಹಿತಿಯನ್ನು ದೃಢೀಕರಿಸಲು ಆಗುವುದಿಲ್ಲ. ಅಂದರೆ ಸಿಮ್ ಪಡೆಯುವುದು, ಬ್ಯಾಂಕ್ ಅಕೌಂಟ್ ತೆರೆಯುವುದು ಸೇರಿದಂತೆ ದುಷ್ಕರ್ಮಿಗಳು ಮೋಸ ಮಾಡುವ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಒಮ್ಮೆ ಪ್ರೊಫೈಲ್ ಲಾಕ್ ಮಾಡಿದರೆ ಅದು ಅನ್ಲಾಕ್ ಆಗುವವರೆಗೆ ನೀವೂ ಸಹ ಆಧಾರ್ ವಿವರ ಬಳಸಿ ಯಾವುದೇ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಆಗುವುದಿಲ್ಲ ಎಂಬ ಅಂಶವನ್ನೂ ಸಾರ್ವಜನಿಕರು ಗಮನದಲ್ಲಿ ಇರಿಸಿಕೊಳ್ಳಬೇಕಿದೆ.
ಆಧಾರ್ ಪ್ರೊಫೈಲ್ ಲಾಕ್ ಮಾಡಬೇಕು ಎಂದಿದ್ದರೆ ಮೊದಲು 16 ಸಂಖ್ಯೆಗಳ ವರ್ಚುವಲ್ ಐಡಿ ನಂಬರ್ ಜನರೇಟ್ ಮಾಡಿಕೊಳ್ಳಿ. ಇದಕ್ಕಾಗಿ ಎಸ್ಎಂಎಸ್ ಅಥವಾ UIDAI ವೆಬ್ಸೈಟ್ ಬಳಸಬಹುದು.
https://resident.uidai.gov.in/bio-lock ಲಿಂಕ್ ಮೂಲಕ ನೇರವಾಗಿ ಪ್ರೊಫೈಲ್ ಲಾಕ್ ಸೆಕ್ಷನ್ಗೆ ಹೋಗಬಹುದು. ಅಥವಾ UIDAI ವೆಬ್ಸೈಟ್ನಲ್ಲಿರುವ ‘My Aadhaar’ ಟ್ಯಾಬ್ ಕ್ಲಿಕ್ ಮಾಡಿ.
ನಂತರ ‘Aadhaar Services’ ವಿಭಾಗದಲ್ಲಿರುವ ‘Aadhaar lock/unlock’ ವಿಭಾಗಕ್ಕೆ ಹೋಗಿ. ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿ. ನಂತರ ಸ್ಕ್ರೀನ್ ಮೇಲೆ ಇರುವ ‘Enable’ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಹಂತದ ನಂತರ ನಿಮ್ಮ ಬಯೊಮೆಟ್ರಿಕ್ ವಿವರಗಳು ಲಾಕ್ ಆಗುತ್ತವೆ.
ಒಂದು ವೇಳೆ ನಿಮ್ಮ ಬಯೊಮೆಟ್ರಿಕ್ ವಿವರಗಳನ್ನು ಅನ್ಲಾಕ್ ಮಾಡಬೇಕು ಎಂಬ ಪರಿಸ್ಥಿತಿ ಬಂದರೆ ಮೊದಲೇ ಪಡೆದುಕೊಂಡಿದ್ದ ವರ್ಚುವಲ್ ಐಡಿ ನಮೂದಿಸಿ. ಒಟಿಪಿ ಎಂಟರ್ ಮಾಡಿ. ನೀವು ಒಟಿಪಿ ಎಂಟರ್ ಮಾಡಿದ ನಂತರ ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳು ಅನ್ಲಾಕ್ ಆಗುತ್ತವೆ.