ರಾಜ್ಯದೆಲ್ಲೆಡೆ ಸರ್ಕಾರಿ ಗೋಶಾಲೆಯ 31 ಗೋವುಗಳ ದತ್ತು ಸ್ವೀಕಾರ: ನಟ ಸುದೀಪ್ ಘೋಷಣೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದರು.
ಸುದೀಪ್
ಸುದೀಪ್

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದರು.

ಇಂದು ತಮ್ಮ ನಿವಾಸದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದರು.

ನನ್ನನ್ನು ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನನ್ನನ್ನು ನೇಮಕ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪ್ರಭು ಚವ್ಹಾಣ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ಸಾರ್ವಜನಿಕರು, ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು ಎಂದು ಸುದೀಪ್ ಮನವಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು 11 ಗೋವು ದತ್ತು ಪಡೆದು, ತಮ್ಮ ಕನಸಿನ ಕೂಸಾದ ‘ಪುಣ್ಯಕೋಟಿ ದತ್ತು ಯೋಜನೆ’ ಜಾರಿಗೆ ತಂದರು. ನಾನು ಕೂಡ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆದಿದ್ದೇನೆ’ ಎಂದು ಸಚಿವ ಪ್ರಭು ಚವ್ಹಾಣ್ ಅವರು ವಿವರಿಸಿದಾಗ ‘ನಾನು ಕೂಡ ನಿಮ್ಮಂತೆ ದತ್ತು ಪಡೆಯುತ್ತಿದ್ದೇನೆ’ ಎಂದು ಸುದೀಪ್ ಅವರು ಸಚಿವರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಚಿತ್ರನಟ ಸುದೀಪ್ ಅವರಿಗೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರ ವಿತರಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ 100 ಸರ್ಕಾರಿ ಗೋಶಾಲೆ ಸ್ಥಾಪಿಸಲಾಗುತ್ತಿದೆ.‌

ರಾಷ್ಟ್ರದಲ್ಲಿಯೇ ‘ಪುಣ್ಯಕೋಟಿ ದತ್ತು ಯೋಜನೆ’ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಕೇಂದ್ರ, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮ ನಿರ್ಭರ ಗೋಶಾಲೆ ಸ್ಥಾಪನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ’ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com