ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ಒಕ್ಕಲಿಗರ ಸಂಘದ ಪದಾಧಿಕಾರಿಯಿಂದ ಗುತ್ತಿಗೆದಾರನಿಗೆ 35 ಲಕ್ಷ ರೂ. ವಂಚನೆ

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಯೊಬ್ಬರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಗುತ್ತಿಗೆದಾರರಿಗೆ 35 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಯೊಬ್ಬರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಗುತ್ತಿಗೆದಾರರಿಗೆ 35 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಂಬಂಧಿಯೊಬ್ಬರ ಪುತ್ರನಿಗೆ ನೀಟ್‌ ಮೂಲಕ ವೈದ್ಯಕೀಯ ಸೀಟು ಸಿಗಲಿಲ್ಲ. ಹೀಗಾಗಿ, ತಮಗೆ ಪರಿಚಯವಿದ್ದ ಸಂಘದ ಪದಾಧಿಕಾರಿ ಮಂಜೇಗೌಡ ಎಂಬುವವರನ್ನು ಸಂಪರ್ಕಿಸಿದ್ದೆ. ಮಂಜೇಗೌಡ ಅವರು ಸಂಘದ ಅಧ್ಯಕ್ಷರ ನಿಕಟವರ್ತಿಯಾಗಿದ್ದು, ವೈದ್ಯಕೀಯ ಸೀಟು ಪಡೆಯಲು ಸಹಕರಿಸುವುದಾಗಿ ಹೇಳಿದ್ದರು. ಆದರೆ, ಸೀಟು ಕೊಡಿಸಲು 35 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾರ್ಚ್ 7 ರಂದು ವಸಂತನಗರದ ಸ್ಟಾರ್ ಹೋಟೆಲ್‌ನಲ್ಲಿ ಮಂಜೇಗೌಡ ಮತ್ತು ಅವರ ಪತ್ನಿಗೆ ಹಣವನ್ನು ನೀಡಿರುವುದಾಗಿ ಹನುನಂತನಗರ ನಿವಾಸಿ ಶ್ರೀನಿವಾಸ್‌ ಕೆಆರ್‌ ಹೈಗ್ರೌಂಡ್ಸ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

“ಮೂರು ದಿನಗಳ ನಂತರ ಅಧ್ಯಕ್ಷರ ಕೊಠಡಿಗೆ ಬರುವಂತೆ ಪದಾಧಿಕಾರಿಗಳು ನನಗೆ ತಿಳಿಸಿದ್ದರು. ಅಲ್ಲಿಗೆ ಹೋದಾಗ ಮಂಜೇಗೌಡರು ಒಂದು ವಾರದ ನಂತರ ಬರುವಂತೆ ಹೇಳಿದರು. ಆದರೀಗ ಪ್ರವೇಶ ಪ್ರಕ್ರಿಯೆ ಮುಗಿದಿದೆ. ನಮಗೆ ಸೀಟು ಸಿಕ್ಕಿಲ್ಲ. ಮಂಜೇಗೌಡರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ, ನಾನು ಮೈಸೂರಿನ ಅವರ ನಿವಾಸಕ್ಕೆ ಹೋದೆ, ಮಂಜೇಗೌಡ, ಅವರ ಪತ್ನಿ ಮೀನಾ ಮತ್ತು ಅವರ ಸ್ನೇಹಿತರೊಬ್ಬರು ಅಸಭ್ಯವಾಗಿ ನಿಂದಿಸಿ ನನಗೆ ಬೆದರಿಕೆ ಹಾಕಿದರು ಎಂದು ಹೇಳಿಕೊಂಡಿದ್ದಾರೆ.

ಈ ಸಂಬಂಧ ಪೊಲೀಸರು ವಂಚನೆ, ಕ್ರಿಮಿನಲ್ ಬೆದರಿಕೆ ಮತ್ತಿತರ ಆರೋಪದಡಿ ಮಂಜೇಗೌಡ, ಮೀನಾ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸರು ಮಂಜೇಗೌಡರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com