ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಮೇಯಲು ಕಟ್ಟಿ ಹಾಕಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಆರೋಪಿಯನ್ನು ಅಬೂಬ್ಬಕ್ಕರ್ ಸಿದ್ಧಿಕ್ ಎಂದು ಗುರುತಿಸಲಾಗಿದ್ದು, ಗ್ರಾಮಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗ್ರಾಮದ ಸಿ.ಎ. ದೇವಯ್ಯ ಎಂಬುವವರು ಹಸುವನ್ನು ಮೇಯಲು ಬಿಟ್ಟು ಸಂತೆಗೆ ಹೋಗಿದ್ದರು. ಸಂತೆಯಿಂದ ವಾಪಸ್ ಬಂದಾಗ ತಮ್ಮ ಹೊಲದ ದಾರಿಯಲ್ಲಿ ಬೈಕ್ ನಿಂತಿರುವುದನ್ನು ಕಂಡಿದ್ದಾರೆ. ಬಳಿಕ ಮೇಯಲು ಕಟ್ಟಿದ್ದ ಹಸುವನ್ನು ಮನೆಗೆ ಕರೆದುಕೊಂಡು ಬರಲು ಹೊಲದ ಬಳಿ ತೆರಳಿದ್ದಾರೆ.
ಈ ವೇಳೆ ಅಪರಚಿತ ವ್ಯಕ್ತಿಯೊಬ್ಬ ತಮ್ಮ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಆರೋಪಿಯನ್ನು ಹಿಡಿದಿದ್ದಾರೆ. ವಿಚಾರಣೆ ನಡೆಸಿದಾಗ ಆತ ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಎಂದು ತಿಳಿದುಬಂದಿದೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಭಾರತೀಯ ದಂಡ ಸಂಹಿತೆಯ ಕಲಂ 377ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Advertisement