ವಿ.ವಿ ಗಳ ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸಭೆ ನೇರ ಪ್ರಸಾರ ವ್ಯವಸ್ಥೆಗೆ ಡಿಸೆಂಬರ್ ನಲ್ಲಿ ಚಾಲನೆ: ಸಚಿವ ಅಶ್ವತ್ಥ್ ನಾರಾಯಣ್
ಮಾಜಿ ಪ್ರಧಾನಮಂತ್ರಿ ದಿವಂಗತ ಎ.ಬಿ. ವಾಜಪೇಯಿ ಅವರ ನೆನಪಿನಲ್ಲಿ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ ವನ್ನಾಗಿ ಆಚರಿಸಲಾಗುತ್ತಿದ್ದು, ತಮ್ಮ ವ್ಯಾಪ್ತಿಯ ಇಲಾಖೆಗಳಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದೆ.
Published: 30th November 2022 12:57 PM | Last Updated: 30th November 2022 02:39 PM | A+A A-

ಅಶ್ವತ್ಥ್ ನಾರಾಯಣ್
ಬೆಂಗಳೂರು: ಮಾಜಿ ಪ್ರಧಾನಮಂತ್ರಿ ದಿವಂಗತ ಎ.ಬಿ. ವಾಜಪೇಯಿ ಅವರ ನೆನಪಿನಲ್ಲಿ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ ವನ್ನಾಗಿ ಆಚರಿಸಲಾಗುತ್ತಿದ್ದು, ತಮ್ಮ ವ್ಯಾಪ್ತಿಯ ಇಲಾಖೆಗಳಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದೆ. ಅದರ ಒಂದು ಭಾಗವಾಗಿ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳ ನೇರ ಪ್ರಸಾರಕ್ಕೆ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷಗಳಲ್ಲಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಂದು ‘ಸುಶಾಸನ ದಿನ’ ಆಚರಿಸಲಾಗುತ್ತಿತ್ತು. ಈ ವರ್ಷ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳು ಪೂರ್ತಿ (ಡಿಸೆಂಬರ್ 1 ರಿಂದ 31ರವರೆಗೆ) ‘ಸುಶಾಸನ ಮಾಸ’ವನ್ನಾಗಿ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 1ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾವು ನಿರ್ವಹಿಸುವ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್/ಐಟಿಬಿಟಿ/ವಿಜ್ಞಾನ ಮತ್ತು ತಂತ್ರಜ್ಞಾನ/ ಹಾಗೂ ಕೌಶಲಾಭಿವೃದ್ಧಿ/ಉದ್ಯಮಶೀಲತೆ/ ಜೀವನೋಪಾಯ ಇಲಾಖೆಗಳಲ್ಲಿ ಇದರ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ, ಅಮಾನತು ಮಾಡಿಲ್ಲ: ಸಚಿವ ಅಶ್ವತ್ಥ್ ನಾರಾಯಣ್
ವಿಶ್ವವಿದ್ಯಾಲಯದ ಆಡಳಿತವನ್ನು ಪಾರದರ್ಶಕವಾಗಿಸುವುದು ಹಾಗೂ ಪರಿಣಾಮಕಾರಿಯಾಗಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಅಕಾಡೆಮಿ ಕೌನ್ಸಿಲ್, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ವ್ಯವಸ್ಥೆಯೂ ಸೇರಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ನೇರ ಪ್ರಸಾರ ನಡೆಯಲಿದೆ. ಒಮ್ಮೆ ಜಾರಿಗೆ ಬರುತ್ತಿದ್ದಂತೆ ಕಾಯಂ ವ್ಯವಸ್ಥೆಯಾಗಿ ಮುಂದುವರಿಯಲಿದೆ ಎಂದು ವಿವರಿಸಿದರು.
ಇದರ ಜೊತೆಗೆ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಡಿಸೆಂಬರ್ 10ರೊಳಗೆ ಆಯಾಯ ವೆಬ್ ಸೈಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ. ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಇದನ್ನು ಪಾಲಿಸಬೇಕು. ಒಂದೊಮ್ಮೆ ಘಟಕ ಕಾಲೇಜುಗಳಲ್ಲಿ ವೆಬ್ಸೈಟ್ ಇಲ್ಲದಿದ್ದರೆ ವಿವಿ ವೆಬ್ ಸೈಟ್ ನಲ್ಲಿಯೇ ವಿವರಗಳನ್ನು ಪ್ರಕಟಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.
ಶುಲ್ಕ ವಿವರದಿಂದ ಹಿಡಿದು ವಿ.ವಿ.ಗಳಿಗೆ ಮಂಜೂರಾದ ಅನುದಾನದ ಮೊತ್ತ, ಕೈಗೊಳ್ಳಲಾಗಿರುವ ಪ್ರಾಜೆಕ್ಟ್ ಗಳು, ಬೋಧಕ ಸಿಬ್ಬಂದಿ ಸಂಖ್ಯೆ, ಬೋಧಕೇತರ ಸಿಬ್ಬಂದಿ ಸಂಖ್ಯೆ, ಹೀಗೆ ಪ್ರತಿಯೊಂದು ಮಾಹಿತಿಯನ್ನೂ ವೆಬ್ಸೈಟ್ನಲ್ಲಿ ಅಡಕಗೊಳಿಸಬೇಕು ಎಂದರು.
ಎನ್ಇಪಿ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಐದು ವರ್ಷಗಳ ಗುರಿಯನಿಟ್ಟುಕೊಂಡು ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ) ಸಿದ್ದಪಡಿಸಲು ವಿವಿ ಗಳಿಗೆ ಸೂಚಿಸಲಾಗಿದೆ. ‘ನೀತಿ’ ಆಯೋಗ ಕೂಡ ಇದನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾಗಾರವನ್ನು ನಡೆಸಲಿದೆ ಎಂದರು.