ದೇಶದ ಭದ್ರತೆ, ಸುರಕ್ಷತೆ ವಿಷಯದಲ್ಲಿ ರಾಜಕಾರಣ ಮಾಡಿದರೆ ಯಾರು ಕ್ಷಮಿಸುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ‌

ದೇಶದ ಭದ್ರತೆ, ಸುರಕ್ಷತೆಯಲ್ಲಿ ರಾಜಕಾರಣ ಮಾಡಿದರೆ ಯಾರೂ ಕ್ಷಮಿಸುವುದಿಲ್ಲ. ಹಲವಾರು ರಾಜಕೀಯ ಪಕ್ಷಗಳು ಪರೋಕ್ಷವಾಗಿ, ಕೆಲವರು ನೇರವಾಗಿ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿರುವುದನ್ನು ದೇಶದ ಜನರು ನೋಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.
ಗೋಸಾಯಿ ಮಠದಲ್ಲಿ ಸಿಎಂ ಬೊಮ್ಮಾಯಿ
ಗೋಸಾಯಿ ಮಠದಲ್ಲಿ ಸಿಎಂ ಬೊಮ್ಮಾಯಿ

ಬೆಂಗಳೂರು: ದೇಶದ ಭದ್ರತೆ, ಸುರಕ್ಷತೆಯಲ್ಲಿ ರಾಜಕಾರಣ ಮಾಡಿದರೆ ಯಾರೂ ಕ್ಷಮಿಸುವುದಿಲ್ಲ. ಹಲವಾರು ರಾಜಕೀಯ ಪಕ್ಷಗಳು ಪರೋಕ್ಷವಾಗಿ, ಕೆಲವರು ನೇರವಾಗಿ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿರುವುದನ್ನು ದೇಶದ ಜನರು ನೋಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಬಸವನಗುಡಿಯ ಗೋಸಾಯಿ ಮಠದಲ್ಲಿ ದಸರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಭದ್ರತೆಯ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಇಂತಹ ಜನರಿಂದ ಎಷ್ಟರಮಟ್ಟಿಗೆ ದೇಶದ ರಕ್ಷಣೆ ಸಾಧ್ಯ ಎನ್ನುವುದು ಜನಸಾಮಾನ್ಯರಿಗೆ ಗೊತ್ತಿದೆ. ಜನರಿಗೆ ಅದರ ಬಗ್ಗೆ ಅರಿವು ಇದೆ. ಏನಾದರೂ ಬಿಟ್ಟಕೊಟ್ಟರೂ, ಈ ದೇಶ ಬಿಟ್ಟುಕೊಡಲು ಯಾರು ಸಿದ್ದರಿಲ್ಲ.‌ ಶಿವಾಜಿ ಮಹಾರಾಜರು ಪ್ರಾರಂಭ ಮಾಡಿದಂತಹ ಹೋರಾಟವನ್ನು ಈ ದೇಶ ಉಳಿಸಲು ಮಾಡಬೇಕಾದ ಅವಶ್ಯಕತೆ ಇದೆ. ಅಂತಹ ಪರಂಪರೆಗೆ ಗೋಸಾಯಿ ಕುಲದ ಜನರು ಸೇರಿದ್ದಿರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಗೋಸಾಯಿ ಮಠದ ಪರಂಪರೆ ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠವಾದ ಪರಂಪರೆ. ಭವಾನಿ ಮಾತೆಯ ಆಶೀರ್ವಾದ ಈ ಕುಲಕ್ಕಿದೆ. ಶಿವಾಜಿ ಮಹಾರಾಜರು ವಿಂದ್ಯದಿಂದ ಹಿಡಿದು ಕನ್ಯಾಕುಮಾರಿವರೆಗೂ ಸಾಮ್ರಾಜ್ಯ ವಿಸ್ತರಣೆ ಮಾಡಿದರು. ಆದರೂ ಕೂಡ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಿದರು. ಒಂದು ಸಾಮ್ರಾಜ್ಯದಲ್ಲಿ ಸಂಖ್ಯೆ ಮುಖ್ಯವಲ್ಲ, ಆತ್ಮಸ್ಥೈರ್ಯ ಮುಖ್ಯ ಎನ್ನುವುದನ್ನು ಶಿವಾಜಿ ಮಹಾರಾಜರು ತೋರಿಸಿ ಕೊಟ್ಟರು. ಬೃಹತ ಮೊಘಲ್ ಸಾಮ್ರಾಜ್ಯವನ್ನೇ ಎದುರಿಸಿದವರು ಶಿವಾಜಿ ಮಹಾರಾಜರು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಮೊದಲು ಸೈನಿಕರ ಲೆಕ್ಕಾಚಾರದ ಮೇಲೆ ಸಾಮ್ರಾಜ್ಯದ ಬಲವನ್ನು ಆಲೆಯಲಾಗುತ್ತಿತ್ತು. ಇದರ ಲಾಭವನ್ನು ವಿದೇಶದಿಂದ ಬಂದ ಆಕ್ರಮಣಕಾರರು ತೆಗೆದುಕೊಂಡರು. ದೊಡ್ಡ ದೊಡ್ಡ ಸಾಮ್ರಾಜ್ಯಗಳ ನಡುವೆ ತಮ್ಮ ಸಣ್ಣ ಸೇನೆಗಳನ್ನು ತೆಗೆದುಕೊಂಡು ಬಂದು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ನಮ್ಮ ಬಳಿ ಎಲ್ಲವೂ ಇದ್ದರೂ ಕೂಡ ಎದುರಿಸುವ ಅರಿವು ನಮ್ಮ ಆಗಿನ ಆಡಳಿತಗಾರರಿಗೆ ಇರಲಿಲ್ಲ. ಆದರೆ ಯಾವಾಗ ಶಿವಾಜಿ ಮಹಾರಾಜರು ಯುದ್ಧದಲ್ಲಿ ಬೇರೆ ಬೇರೆ ವಿಧಾನವನ್ನು ತೆಗೆದುಕೊಂಡು ‌ಬಂದು ಸಾಮ್ರಾಜ್ಯ ವಿಸ್ತರಣೆ ಮಾಡಿದರು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಎಲ್ಲ ರಾಜಮಹಾರಾಜರಿಗೆ ಶಿವಾಜಿ ತಮ್ಮ ಶಕ್ತಿಯ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಯೋಜನಾಬದ್ಧ, ನಿರ್ದಿಷ್ಟ ಗುರಿ ಇಟ್ಟುಕೊಂಡು ಶಿವಾಜಿ ಮಹಾರಾಜರು ಕೆಲಸ ಮಾಡುತ್ತಿದ್ದರು. ಅಂತಹ ಪರಂಪರೆಗೆ ಮರಾಠರು ನೀವು ಸೇರಿದ್ದೀರಿ ಅನ್ನುವ ಅರಿವು ನಿಮಗಿರಬೇಕು. ಅವತ್ತು ಶಿವಾಜಿ ಇದ್ದರು. ಈಗ ಅಂತವರು ಕಾಣಿಸುತ್ತಿಲ್ಲ.‌ ಶಿವಾಜಿ ಮಹಾರಾಜರ ಆದರ್ಶಗಳಂತೆ ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಭಾಷೆ, ಬೇರೆ ಬೇರೆ ವೈಚಾರಿಕತೆಯ ವಿಚಿತ್ರ ಶಕ್ತಿಗಳು ದೇಶವನ್ನು ಒಡೆಯುವ ಕೆಲಸ ಮಾಡುತ್ತಿವೆ. ಅವುಗಳನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಿಯಂತ್ರಣ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಥಮ ಭಯೋತ್ಪಾದನೆಯ ಮೇಲೆ ಸಂಪೂರ್ಣವಾದ ನಿಯಂತ್ರಣ ಮಾಡಿರುವ ಸರ್ಕಾರ ಇವತ್ತು ಇದೆ. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೆ ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತೆ ನರೇಂದ್ರ ಮೋದಿಯವರು ಆಡಳಿತ ಮಾಡುತ್ತಿದ್ದಾರೆ. ಈ ಭಾವನೆ ಬಹಳ ಮುಖ್ಯ ಎಂದು ಸಿಎಂ ಬೊಮ್ಮಾಯಿ‌ ನುಡಿದರು.

ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಮರಾಠ ಸಮುದಾಯ ನಡೆಯುತ್ತಿದೆ.‌ ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ತಾತ್ವಿಕ ಸ್ವರೂಪ ಕೊಟ್ಟು ಮಾರ್ಗದರ್ಶನ ಮಾಡುವ ಶಕ್ತಿ ಸ್ವಾಮೀಜಿಗಳಿಗೆ ಇದೆ. ನಾಡಿನೆಲ್ಲೆಡೆ ಅವರು ತೆಗೆದುಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಾವೆಲ್ಲರೂ ಸೇರಿ ಬೆಂಬಲ ಕೊಡುತ್ತೇವೆ.

ದಸರಾ ದುಷ್ಟ ಶಕ್ತಿಗಳ ವಿರುದ್ಧ ನಡೆಯುವ ಹಬ್ಬ. ದೇಶದಲ್ಲಿ ಬೇರೆ ಬೇರೆ ರೀತಿಯಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ದುಷ್ಟರ ನಾಶ, ಶಿಷ್ಟರ ರಕ್ಷಣೆಯೇ ಈ ಹಬ್ಬದ ಸಂಕೇತ. ನಮ್ಮಲ್ಲಿರುವ ದುಷ್ಟ ವಿಚಾರಗಳನ್ನು ನಿಗ್ರಹಿಸುವ ಸಂಕಲ್ಪವನ್ನು ಈ ದಿನ ಮಾಡೋಣ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com