ಬೀದರ್: ಬೀಗ ಒಡೆದು ಒಳನುಗ್ಗಿ ಮದರಸಾದಲ್ಲಿ ಪೂಜೆ ಸಲ್ಲಿಸಿದ ಹಿಂದೂಗಳು; 60 ಜನರ ವಿರುದ್ಧ ಪ್ರಕರಣ ದಾಖಲು

ಬೀದರ್‌ನ ಐತಿಹಾಸಿಕ ಮಹ್ಮದ್ ಗವಾನ್ ಮದರಸಾದೊಳಗೆ ಹಿಂದೂ ಕಾರ್ಯಕರ್ತರು ನುಗ್ಗಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಹೀಗಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಬೀದರ್ ಮದರಸಾದ ಬೀಗ ಒಡೆದು ಒಳನುಗ್ಗಿ ಪೂಜೆ ಸಲ್ಲಿಸಿದ ಗುಂಪು
ಬೀದರ್ ಮದರಸಾದ ಬೀಗ ಒಡೆದು ಒಳನುಗ್ಗಿ ಪೂಜೆ ಸಲ್ಲಿಸಿದ ಗುಂಪು

ಬೀದರ್: ಬೀದರ್‌ನ ಐತಿಹಾಸಿಕ ಮಹ್ಮದ್ ಗವಾನ್ ಮದರಸಾದೊಳಗೆ ಹಿಂದೂ ಕಾರ್ಯಕರ್ತರು ನುಗ್ಗಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಹೀಗಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಘಟನೆ ಬುಧವಾರ ನಡೆದಿದ್ದು, ಘಟನೆಯ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೊಲೀಸರ ಪ್ರಕಾರ, ಬೀದರ್‌ನಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಿಂದೂ ಕಾರ್ಯಕರ್ತರ ಗುಂಪು ಬುಧವಾರ ರಾತ್ರಿ ಮಹ್ಮದ್ ಗವಾನ್ ಮದರಸಾದ ಆವರಣದೊಳಗೆ ನುಗ್ಗಿ ಪೂಜೆ ಸಲ್ಲಿಸಿದೆ.

ಸ್ಥಳೀಯರು ನೀಡಿದ ದೂರಿನ ನಂತರ, ಘಟನೆಗೆ ಸಂಬಂಧಿಸಿದಂತೆ 60 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೊಹಮ್ಮದ್ ಶಫಿಯೋಗಿದ್ದಿನ್ ಮೊಹಮ್ಮದ್ ಬಿಸ್ಮಿಲ್ಲಾ (69) ಅವರು ಬೀದರ್ ಟೌನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, 'ಮಹಮ್ಮದ್ ಗವಾನ್ ಮದರಸಾ ಮತ್ತು ಮಸೀದಿಯ ಬೀಗ ಒಡೆದು ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕುವ ಮೂಲಕ ಗುಂಪೊಂದು ಅಕ್ರಮವಾಗಿ ಪ್ರವೇಶಿಸಿದೆ. ಇಂತಹ ಪ್ರಚೋದನಕಾರಿ ಕೃತ್ಯಗಳ ಮೂಲಕ ನಗರದಲ್ಲಿ ದೀರ್ಘಕಾಲದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತಂದಿದೆ. ಗುಂಪಿನಲ್ಲಿದ್ದ ಜನರು ದೇಶದ ವಿರುದ್ಧ ಘೋಷಣೆಗಳನ್ನು ಕೂಗಿ ಜನರನ್ನು ಕೆರಳಿಸಲು ಯತ್ನಿಸುತ್ತಿದ್ದರು ಎಂದು ಹೇಳಿದ್ದಾರೆ.

ಜನರ ಗುಂಪು ಪೂಜೆ ಸಲ್ಲಿಸಲು ಅಕ್ರಮವಾಗಿ ಮದರಸಾ ಆವರಣಕ್ಕೆ ಪ್ರವೇಶಿಸಿದಾಗ ಪೊಲೀಸ್ ಸಿಬ್ಬಂದಿ ಸಹ ಅಲ್ಲಿದ್ದರು. ಕೆಎ-38 ಜಿ 315 ನೋಂದಣಿ ಸಂಖ್ಯೆಯ ಪೊಲೀಸ್ ಜೀಪ್ ಸ್ಥಳದಲ್ಲಿತ್ತು ಎಂದು ಆರೋಪಿಸಿದ್ದಾರೆ.

ಸಂರಕ್ಷಿತ ಸ್ಮಾರಕದ ಬೀಗ ಮುರಿದು ಒಳ ನುಗ್ಗಿದ ಹಿಂದೂ ಕಾರ್ಯಕರ್ತರು, ಜೈ ಶ್ರೀರಾಮ್ ಮತ್ತು ಜೈ ಹಿಂದೂ ರಾಷ್ಟ್ರ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ಕಟ್ಟಡದ ಒಂದು ಮೂಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಖಂಡಿಸಿ ಬೀದರ್‌ನಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾರಂಪರಿಕ ಕಟ್ಟಡವೆಂದು ಪರಿಗಣಿಸಲ್ಪಟ್ಟಿರುವ ಮದರಸಾವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರ್ವಹಿಸುತ್ತಿದೆ. ಕ್ರಿಸ್ತಶಕ 1460 ರಲ್ಲಿ ನಿರ್ಮಿಸಲಾದ ಮದರಸಾವನ್ನು ಭಾರತದ ಪ್ರಮುಖ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. 'ಉಗ್ರರು ಗೇಟ್ ಬೀಗವನ್ನು ಮುರಿದು ಐತಿಹಾಸಿಕ ಮಹಮ್ಮದ್ ಗವಾನ್ ಮಸೀದಿಯನ್ನು ಅಪವಿತ್ರಗೊಳಿಸಲು ಯತ್ನಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬೀದರ್ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇದಕ್ಕೆ ನೀವು ಹೇಗೆ ಅವಕಾಶ ನೀಡುತ್ತೀರಿ? ಕೇವಲ ಮುಸ್ಲಿಮರನ್ನು ಕೀಳಾಗಿಸುವುದಕ್ಕಾಗಿ ಬಿಜೆಪಿ ಇಂತಹ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com