ತೆರವು ಕಾರ್ಯ ವಿರೋಧಿಸಿ ದಂಪತಿ ಆತ್ಮಹತ್ಯೆಗೆ ಯತ್ನ; ಕೆ ಆರ್ ಪುರಂನಲ್ಲಿ ಹೈಡ್ರಾಮಾ; ವಶಕ್ಕೆ ಪಡೆದ ಪೊಲೀಸರು, ಮನೆ ಕೆಡವಿದ ಪಾಲಿಕೆ

ಅಕ್ರಮ ಒತ್ತುವರಿ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೊನ್ನೆ ಸೋಮವಾರ ಬಿಬಿಎಂಪಿ ಪುನರಾರಂಭಿಸಿದ್ದು ಇಂದು ಬುಧವಾರ ಬೆಳಗ್ಗೆ ಕೆ ಆರ್ ಪುರಂನಲ್ಲಿ ಕಾರ್ಯಾಚರಣೆಗಿಳಿದಿತ್ತು.
ಆತ್ಮಹತ್ಯೆಗೆ ಯತ್ನಿಸಿದ ದಂಪತಿ
ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಬೆಂಗಳೂರು: ಅಕ್ರಮ ಒತ್ತುವರಿ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೊನ್ನೆ ಸೋಮವಾರ ಬಿಬಿಎಂಪಿ ಪುನರಾರಂಭಿಸಿದ್ದು ಇಂದು ಬುಧವಾರ ಬೆಳಗ್ಗೆ ಕೆ ಆರ್ ಪುರಂನಲ್ಲಿ ಕಾರ್ಯಾಚರಣೆಗಿಳಿದಿತ್ತು.

ಈ ವೇಳೆ ಕೆ ಆರ್ ಪುರಂನ ಗಾಯತ್ರಿ ಲೇ ಔಟ್ ನಲ್ಲಿ ಅಕ್ರಮವಾಗಿ ಕಟ್ಟಿದ ಮನೆಯನ್ನು ಕೆಡವಲು ಬುಲ್ಡೋಜರ್ ನೊಂದಿಗೆ ಪಾಲಿಕೆ ಸಿಬ್ಬಂದಿ ಬಂದಾಗ ಮನೆಯೊಳಗಿದ್ದ ಸೋನಾ ಸೇನ್ ಮತ್ತು ಸುನಿಲ್ ಸಿಂಗ್ ದಂಪತಿ ಕ್ಯಾನ್ ನಲ್ಲಿ ಸೀಮೆಎಣ್ಣೆ ಮತ್ತು ಬೆಂಕಿ ಪೊಟ್ಟಣ ಹಿಡಿದುಕೊಂಡು ಮನೆಯ ಹಿಂಭಾಗ ನಿಂತು ಕಟ್ಟಡ ಕೆಡವಲು ಮುಂದಾದರೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಬೆದರಿಕೆ ಹಾಕಿದರು.

ಈ ದಂಪತಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡದಿಂದ 2 ಮೀಟರ್​ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿ ಆಗಿದೆ ಎಂದು ಗುರುತಿಸಿರುವ ಸ್ಥಳದಲ್ಲಿಯೇ ಕಟ್ಟಡದ ಕಂಬವೂ ಇರುವ ಕಾರಣ, ಒತ್ತುವರಿ ತೆರವು ವೇಳೆ ಇಡೀ ಕಟ್ಟಡ ಉರುಳುವ ಭೀತಿಯಿದೆ.

15 ವರ್ಷಗಳ ಹಿಂದೆ 40 ಲಕ್ಷ ಸಾಲ ರೂಪಾಯಿ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡು ಕಂಗಾಲಾಗಿದ್ದೆವು. ಈಗ ಪರಿಸ್ಥಿತಿ ಒಂದು ಹಂತಕ್ಕೆ ಬರುತ್ತಿದೆ. ಮನೆ ಕಳೆದುಕೊಂಡರೆ ಬದುಕುವುದು ಹೇಗೆ, ಮನೆ ಕೆಡವಲು ಬಿಡುವುದಿಲ್ಲ ಎಂದು ಪೆಟ್ರೋಲ್ ಕ್ಯಾನ್ ಹಿಡಿದು ಆತ್ಮಹತ್ಯೆಗೆ ದಂಪತಿ ಯತ್ನಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ಸ್ಥಳದಿಂದ ಹೊರಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರ ಎದುರೇ ದಂಪತಿ ಬೆಂಕಿಕಡ್ಡಿ ಗೀರಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಕೈಹಿಡಿದು ತಡೆದರು. ‘ಈ ಮನೆ ಸದ್ಯಕ್ಕೆ ಬಿಟ್ಟು, ಬೇರೆ ಮನೆ ಡಿಮಾಲಿಷನ್’ ಮಾಡಿ ಎಂದು ಪೊಲೀಸರು ಬಿಬಿಎಂಪಿಗೆ ಸೂಚಿಸಿದಾಗ ಅದಕ್ಕೂ ದಂಪತಿ ವಿರೋಧ ವ್ಯಕ್ತಪಡಿಸಿದರು. ‘ಯಾರ ಮನೆಯನ್ನೂ ಕೆಡವುವಂತಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಇಲ್ಲಿಂದ ವಾಪಸ್ ಹೋಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಅಹವಾಲು ಆಲಿಸಬೇಕು. ನಾವು ಒಂದೊಮ್ಮೆ ಬೆಂಕಿ ಹಚ್ಚಿಕೊಂಡರೆ ಅದಕ್ಕೆ ಪೊಲೀಸರೇ ಕಾರಣ ಎಂದು ದಂಪತಿ ಆಕ್ರೋಶ ವ್ಯಕ್ತಪಡಿಸಿದರು.

ವಶಕ್ಕೆ ಪಡೆದ ಪೊಲೀಸರು: ಒಂದು ಹಂತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬಿಟ್ಟಿದ್ದರು. ಆಗ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ದಂಪತಿ ಮೈಗೆ ನೀರು ಹರಿಸಿ ದಂಪತಿಯನ್ನು ಬಲವಂತವಾಗಿ ಎಳೆದು ಮನೆಯೊಳಗೆ ಕರೆದುಕೊಂಡು ಹೋದ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಪಾಲಿಕೆ ಸಿಬ್ಬಂದಿ ಅವರ ಮನೆಯನ್ನು ಬುಲ್ಡೋಜರ್ ನಿಂದ ಕೆಡವಿ ಬೀಳಿಸಿದರು. 

ನಿನ್ನೆಯಿಂದಲೂ ದಂಪತಿ ಇದೇ ರೀತಿ ನಡೆದುಕೊಳ್ಳುತ್ತಿದ್ದು, ಕಾನೂನಿನಲ್ಲಿ ಇಂತಹ ವರ್ತನೆಗೆ ಅವಕಾಶವಿಲ್ಲ ಎಂದು ಕಟ್ಟಡ ಧ್ವಂಸ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com