ಹಾಸನ ಜಿಲ್ಲೆಯ ಅರಸೀಕೆರೆ ಬಳಿ ಭೀಕರ ಅಪಘಾತದಲ್ಲಿ 9 ಮಂದಿ ಸಾವು: ಮುಖ್ಯಮಂತ್ರಿ ಕಂಬನಿ, ಪರಿಹಾರ ಭರವಸೆ
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಹಳ್ಳಿಕೆರೆ ಗ್ರಾಮದ ಬಳಿ ಕಳೆದ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ.
Published: 16th October 2022 08:41 AM | Last Updated: 16th October 2022 01:38 PM | A+A A-

ಅಪಘಾತ ನಂತರ ದೃಶ್ಯ
ಅರಸೀಕೆರೆ(ಹಾಸನ): ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಹಳ್ಳಿಕೆರೆ ಗ್ರಾಮದ ಬಳಿ ಕಳೆದ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ.
ಮೃತರು ಯಾರ್ಯಾರು?: ಸರ್ಕಾರಿ ಬಸ್ಸು, ಹಾಲಿನ ಟ್ಯಾಂಕರ್ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಸರಣಿ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು 50 ವರ್ಷದ ಲೀಲಾವತಿ, 33 ವರ್ಷದ ಚೈತ್ರಾ, 10 ವರ್ಷದ ಸಮರ್ಥ್, 12 ವರ್ಷದ ದೀಪ್ತಿ, 10 ವರ್ಷದ ತನ್ಮಯಿ, 2 ವರ್ಷದ ಮಗು ಧ್ರುವ, 20 ವರ್ಷದ ವಂದನಾ, 60 ವರ್ಷದ ದೊಡ್ಡಯ್ಯ ಮತ್ತು 50 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಮೃತರು ಟೆಂಪೋ ಟ್ರಾವಲರ್ ನಲ್ಲಿ ಪ್ರಯಾಣಿಸುತ್ತಿದ್ದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ತಮ್ಮೂರು ಅರಸೀಕೆರೆಯ ಬಾಣಾವರಕ್ಕೆ ವಾಪಸಾಗುತ್ತಿದ್ದರು.
9 Persons killed 5 Others injured in a Head on collusion near #Banavara #Arasikere. JDS Supremo Devegowda expressed deep concern. @XpressBengaluru @Cloudnirad @ramupatil_TNIE @SPHassan2 @H_D_Devegowda @DgpKarnataka pic.twitter.com/yFRrF5UjZh
— BR Udaya Kumar (@TnieCom) October 16, 2022
ಭೀಕರ ಅಪಘಾತ ಸಂಭವಿಸಿದ್ದೇಗೆ?: ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಜುನಾಥನಿಗೆ ಹರಕೆ ಸಲ್ಲಿಸಲೆಂದು ಹೋಗಿದ್ದವರು ದರ್ಶನ ಮಾಡಿಕೊಂಡು ಅಲ್ಲಿಂದ ವಾಪಸ್ ಆಗಿದ್ದರು. ಇನ್ನೇನು ಐದಾರು ಕಿಲೋಮೀಟರ್ನಲ್ಲಿ ಮನೆಗೆ ಸೇರುವ ಮೊದಲೇ ಈ ದುರಂತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಘೋರ ದುರಂತ ಸಂಭವಿಸಿದ್ದು, ಲಾರಿ ಬಸ್ ಮಧ್ಯೆ ಸಿಲುಕಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅದು ಚತುಷ್ಪಥ ದಾರಿ. ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಟಿಟಿ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಏಕಮುಖ ಸಂಚಾರ ಮಾಡಲಾಗಿತ್ತು. ಆದರೆ ಕಾಮಗಾರಿ ಬೋರ್ಡ್ ಹಾಕಿರಲಿಲ್ಲ. ಪರಿಣಾಮ ಚತುಷ್ಪಥದ ಒನ್ ವೇಯಲ್ಲಿ ಹಾಲಿನ ಟ್ಯಾಂಕರ್ ನುಗ್ಗಿ ಬಂತು. ಎದುರುಗಡೆಯಿಂದ ಟ್ಯಾಂಕರ್ ಬಂದಿರುವುದು ಟಿಟಿ ಚಾಲಕನಿಗೆ ಗೊತ್ತಾಗಲಿಲ್ಲ. ಈ ವೇಳೆ ರಸ್ತೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸು ಮತ್ತು ಟಿಟಿ ವಾಹನ ಜೊತೆಗೆ ಸಂಚರಿಸುತ್ತಿತ್ತು. ಕೊನೆ ಕ್ಷಣದಲ್ಲಿ ಎದುರಿಗೆ ಬರುತ್ತಿದ್ದ ಟ್ಯಾಂಕರ್ ನೋಡಿದ ತಕ್ಷಣ ಟಿಟಿ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಕೆಎಸ್ ಆರ್ ಟಿಸಿ ಬಸ್ ಗೆ ಟಿಟಿ ಡಿಕ್ಕಿಯಾಗಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಟಿಟಿಗೆ ಡಿಕ್ಕಿಯಾಗಿದೆ.
ಮುಖ್ಯಮಂತ್ರಿ ಸೇರಿ ರಾಜಕೀಯ ಮುಖಂಡರ ಕಂಬನಿ: ಅಪಘಾತದಲ್ಲಿ ಸಾವಿಗೀಡಾಗಿದ್ದನ್ನು ಕೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೊದಲಾದವರು ಕಂಬನಿ ಮಿಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.
— Basavaraj S Bommai (@BSBommai) October 16, 2022
ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಷ್ಟು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ. 3/3
— B Sriramulu (@sriramulubjp) October 16, 2022
ಭೀಕರ ಅಪಘಾತದಲ್ಲಿ 10 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನವಾಗಿದೆ ಎಂದು ಹೇಳಲಾಗಿದೆ. ಇಬ್ಬರಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಗಾಯಾಳುಗಳು ಕೆಎಸ್ಆರ್ ಟಿಸಿ ಬಸ್ ನಲ್ಲಿ ಇದ್ದವರು ಎನ್ನಲಾಗಿದೆ. ಸಾರಿಗೆ ಬಸ್ ನ ಚಾಲಕನೂ ಗಾಯಗೊಂಡಿದ್ದು, ಹಾಲಿನ ಟ್ಯಾಂಕರ್ ಚಾಲಕ ಘಟನೆ ನಡೆದ ಸ್ಥಳದಿಂದ ಪರಾರಿಯಾಗಿದ್ದಾನೆ. ಹಾಲಿನ ಟ್ಯಾಂಕರ್ ಚಾಲನ ನಿರ್ಲಕ್ಷ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.