ಸಿದ್ದರಾಮಯ್ಯ ಸರ್ಕಾರದ ಹಗರಣಗಳ ದಾಖಲೆ ರಾಹುಲ್ ಗಾಂಧಿಗೆ ಕೊಡುವೆ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಗೆ ನೀಡುತ್ತೇನೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ. 
ಬೀದರ್ ನಲ್ಲಿ ಸಿಎಂ ಬೊಮ್ಮಾಯಿ
ಬೀದರ್ ನಲ್ಲಿ ಸಿಎಂ ಬೊಮ್ಮಾಯಿ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಗೆ ನೀಡುತ್ತೇನೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ. 

ಬೀದರ್ ಜಿಲ್ಲೆಯ ಔರಾದ್ ನಲ್ಲಿ ಇಂದು ‘ಜನಸಂಕಲ್ಪ’ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಹಗರಣಗಳು ಹಾಗೂ ಅವ್ಯವಹಾರ ಸಂಬಂಧ ಎಲ್ಲಾ ದಾಖಲೆಗಳನ್ನು ರಾಹುಲ್ ಗಾಂಧಿಗೆ ನೀಡುತ್ತೇನೆ. ಅವರು ಏನು ಮಾಡುತ್ತಾರೆಂದು ಕಾದು ನೋಡೋಣ ಎಂದು ಬಿಜೆಪಿ ಸರ್ಕಾರದಲ್ಲಿ ದುಡ್ಡು ಕೊಟ್ಟರೆ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಬಳ್ಳಾರಿಯಲ್ಲಿ ರಾಹುಲ್ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.

ನನ್ನ ಆಡಳಿತದಲ್ಲಿ ಪಿಎಸ್​ಐ ನೇಮಕಾತಿ ಹಗರಣ ಹೊರಬರುತ್ತಿದ್ದಂತೆ ಕ್ರಮಕೈಗೊಂಡಿರುವೆ. ಬಿಜೆಪಿ, ಕಾಂಗ್ರೆಸ್ ಎನ್ನದೆ ಎಲ್ಲರನ್ನೂ ಬಂಧಿಸಲಾಯಿತು. ಇದರಲ್ಲಿ ಭಾಗಿಯಾದ ಉನ್ನತ ಅಧಿಕಾರಿಗಳನ್ನೂ ನಾವು ಬಿಟ್ಟಿಲ್ಲ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರ್ಜಿ ಸಲ್ಲಿಸದವರಿಗೂ ಸರ್ಕಾರಿ ನೌಕರಿ ನೀಡಲಾಗಿದೆ. ಪ್ರಾಸಿಕ್ಯೂಟರ್ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲೂ ಹೀಗೇ ಆಗಿತ್ತು. ಎಲ್ಲ ಹಗರಣಗಳನ್ನು ಮುಚ್ಚಿ ಹಾಕಿದ್ದರು ಎಂದು ಸಿಎಂ ಟೀಕಿಸಿದರು.

ಅತಿವೃಷ್ಟಿ ಸಂಬಂಧ ಪರಿಹಾರವನ್ನು ನಾವು ಹೆಚ್ಚಿಸಿದ್ದೇವೆ. ಮನೆಗಳ ಸಂಬಂಧ ಪರಿಹಾರ ಮೊತ್ತವನ್ನೂ ಹೆಚ್ಚಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಒಂದರಿಂದ ಒಂದೂವರೆ ವರ್ಷದಲ್ಲಿ ಪರಿಹಾರ ಕೊಡುತ್ತಿತ್ತು. ಈಗ ಕೇವಲ 1ತಿಂಗಳಿನಲ್ಲಿ ಪರಿಹಾರ ನೀಡುತ್ತಿದ್ದೇವೆ ಎಂದರು.

ತಾಂಡಾಗಳ ಅಭಿವೃದ್ಧಿ, ಬಡವರಿಗೆ ನೆರವಾಗಿದ್ದೇವೆ. 23 ಸಾವಿರ ತಾಂಡಾಗಳನ್ನು ಗ್ರಾಮಗಳನ್ನಾಗಿ ಆದೇಶ ಮಾಡಲಾಗಿದೆ. ಮನೆಗಳಿಗೆ ಹಕ್ಕಪತ್ರ ನೀಡಲಾಗುತ್ತಿದೆ, ಕಲ್ಯಾಣ ಕರ್ನಾಟಕಕ್ಕೆ ರೂ. 3 ಸಾವಿರ ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಆರಂಭವಾಗುತ್ತಿದೆ. ಮುಂದಿನ ಬಜೆಟ್‍ನಲ್ಲಿ ರೂ. 5 ಸಾವಿರ ಕೋಟಿ ರೂ. ನೀಡಲಿದ್ದೇವೆ. ಅದಕ್ಕಾಗಿ ಕ್ರಿಯಾ ಯೋಜನೆಯನ್ನೂ ಮಾಡಿದ್ದೇವೆ. 14 ಸಾವಿರ ನೇಮಕಾತಿಗೆ ಅನುಮತಿ ಕೊಟ್ಟಿದ್ದೇವೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com