ವಿಧಾನಸಭೆಯ ಉಪ ಸಭಾಪತಿ ಆನಂದ್ ಮಾಮನಿ ನಿಧನ: ಸಿಎಂ ಬೊಮ್ಮಾಯಿ ಸಂತಾಪ

ರಾಜ್ಯ ವಿಧಾನಸಭೆಯ ಉಪ ಸಭಾಪತಿ, ಸವದತ್ತಿ ಶಾಸಕ ಆನಂದ್ ಮಾಮನಿ (56) ಅವರು ಶನಿವಾರ ತಡರಾತ್ರಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಆನಂದ್ ಮಾಮನಿ
ಆನಂದ್ ಮಾಮನಿ

ಬೆಂಗಳೂರು: ರಾಜ್ಯ ವಿಧಾನಸಭೆಯ ಉಪ ಸಭಾಪತಿ, ಸವದತ್ತಿ ಶಾಸಕ ಆನಂದ್ ಮಾಮನಿ (56) ಅವರು ಶನಿವಾರ ತಡರಾತ್ರಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ. 

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಮಾಮನಿ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಆನಂದ ಮಾಮನಿ ಅವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳಿಂದ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳುರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಆನಂದ್ ಮಾಮನಿ ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆಗೆ ಬರುತ್ತೇನೆ, ಯಾರು ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದರು. 

ಆನಂದ್ ಮಾಮನಿ ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್​ ಮೂಲಕ ಸವದತ್ತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಸಿದ್ಧತೆಗಳು ಆರಂಭವಾಗಿದೆ. 

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. 

ಸಿಎಂ ಬೊಮ್ಮಾಯಿ ಸಂತಾಪ
ಈ ನಡುವೆ ಆನಂದ ಚಂದ್ರಶೇಖರ ಮಾಮನಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ನಮ್ಮ ಪಕ್ಷದ ಶಾಸಕರು, ರಾಜ್ಯ ವಿಧಾ‌ನಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಆತ್ಮೀಯ ಶ್ರೀ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ‌. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com