ನ.11ಕ್ಕೆ ಪ್ರಧಾನಿ ಮೋದಿ ಆಗಮನ: ಸಿಎಂ ನೇತೃತ್ವದಲ್ಲಿ ಪರಿಶೀಲನಾ ಸಭೆ, ಮಣ್ಣು ಸಂಗ್ರಹ ಅಭಿಯಾನಕ್ಕೆ ಮಂಗಳೂರಿನಲ್ಲಿ ಚಾಲನೆ

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸುವ 'ಬನ್ನಿ ನಾಡ ಕಟ್ಟೋಣ' ಅಭಿಯಾನವನ್ನು ಸರ್ಕಾರ ಆರಂಭಿಸಿದೆ. 
ಸಿಎಂ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ
ಸಿಎಂ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು/ಮಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸುವ 'ಬನ್ನಿ ನಾಡ ಕಟ್ಟೋಣ' ಅಭಿಯಾನವನ್ನು ಸರ್ಕಾರ ಆರಂಭಿಸಿದೆ. 

ಈ ಅಭಿಯಾನಕ್ಕೆ ನಿನ್ನೆ ಮಂಗಳೂರಿನ ಲೇಡಿಹಿಲ್ ಬಳಿಯಿರುವ ಮನಪಾ ಈಜುಕೊಳದ ಆವರಣದಲ್ಲಿ ಮಣ್ಣು ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ದೊರಕಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ಸುಸಜ್ಜಿತವಾದ ಪಟ್ಟಣ ಯಾವ ರೀತಿ ಇರಬೇಕೆಂಬ ಕಲ್ಪನೆಯಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಪ್ರಗತಿಯ ವೇಗದಲ್ಲಿ ಬೆಂಗಳೂರು ಇಂದು ನೂರುಪಟ್ಟು ಬೆಳೆದಿದೆ. ಆದರೆ ಇಡೀ ಬೆಂಗಳೂರು ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದವರು ನಾಡಪ್ರಭು ಕೆಂಪೇಗೌಡರು. ಹಲವಾರು ಆಳರಸರಿಂದ ಇಂದು ನಮ್ಮ ರಾಜ್ಯ ನಿರ್ಮಾಣವಾಗಿದೆ. ಆ ಎಲ್ಲಾ ರಾಜ ಮನೆತನಗಳಿಗೆ ಗೌರವ ಕೊಡುವಂತಹ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿದೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ ಎಂದರು.

ನಿನ್ನೆಯಿಂದ ನವೆಂಬರ್ 7ರ ವರೆಗೆ ರಾಜ್ಯಾದ್ಯಂತ ನಡೆಯಲಿರುವ ಮಣ್ಣು ಸಂಗ್ರಹ ಅಭಿಯಾನದ ಕೆಂಪೇಗೌಡ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಈ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಅಲ್ಲಿನ ಮಣ್ಣನ್ನು ಸಂಗ್ರಹಿಸಿ, ಬೆಂಗಳೂರಿನ ಕೆಂಪೇಗೌಡ ಥೀಮ್ ಪಾರ್ಕ್‌ನಲ್ಲಿ ಹಾಕಲಿದೆ.

ಸಿಎಂ ನೇತೃತ್ವದಲ್ಲಿ ಪರಿಶೀಲನಾ ಸಭೆ: ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಉದ್ಘಾಟನೆ ಮತ್ತು ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಪೂರ್ವ ಪರಿಶೀಲನಾ ಸಭೆ ನಡೆಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com