ಕೋಟಿ ಕಂಠ ಗಾಯನ: ಕಾರವಾರದಲ್ಲಿ ಬಿಸಿಲ ಬೇಗೆಗೆ ಬಸವಳಿದು ಮೂರ್ಛೆ ಹೋದ ವಿದ್ಯಾರ್ಥಿಗಳು!
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜ್ಯದ ಹಲವೆಡೆ ಕೋಟಿ ಕಂಠಸಿರಿಯಲ್ಲಿ ನನ್ನ ನಾಡು, ನನ್ನ ಹಾಡು ಹೆಸರಿನಲ್ಲಿ 6 ಹಾಡುಗಳು ಹೊರಮ್ಮಿವೆ.
Published: 29th October 2022 01:34 PM | Last Updated: 29th October 2022 02:04 PM | A+A A-

ಸಾಂದರ್ಭಿಕ ಚಿತ್ರ
ಕಾರವಾರ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜ್ಯದ ಹಲವೆಡೆ ಕೋಟಿ ಕಂಠಸಿರಿಯಲ್ಲಿ ನನ್ನ ನಾಡು, ನನ್ನ ಹಾಡು ಹೆಸರಿನಲ್ಲಿ 6 ಹಾಡುಗಳು ಹೊರಮ್ಮಿವೆ.
ರಾಜ್ಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ನಾನಾ ಕಡೆ ವಿಭಿನ್ನವಾಗಿ ಇದನ್ನೊಂದು ಹಬ್ಬದಂತೆ ಆಚರಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಕಾರವಾರದ ಸದಾಶಿವಗಡದಲ್ಲೂ ಕಾರ್ಯಕ್ರಮ ಆಯೋಜಿಸಿತ್ತು. ಆದರೆ, ಈ ಬೆಟ್ಟದ ಮೇಲೆ ಯಾವುದೇ ಪೆಂಡಾಲ್ ವ್ಯವಸ್ಥೆ ಮಾಡದೆ ಇರುವುದರಿಂದ ಮಕ್ಕಳು ಬಸವಳಿದು ಹಾಡುವ ಮೂಡ್ ಕೂಡಾ ಕಳೆದುಕೊಂಡರು. ಬಿಸಿಲ ಬೇಗೆಯಿಂದ ಬಸವಳಿದ ಕೆಲ ಮಕ್ಕಳು ಮೂರ್ಛೆ ಹೋದರು.
ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳು ಬಂದು ಜಮಾವಣೆಗೊಂಡಿದ್ದರು. ಇಲ್ಲಿ ಕೆಲವೇ ಮರಗಳಿದ್ದು ನೆರಳು ಇಲ್ಲ. ಬೆಳಗ್ಗಿನಿಂದಲೇ ಸೇರಿದ್ದ ವಿದ್ಯಾರ್ಥಿಗಳು ಬಿಸಿಲೇರಿದಂತೆ ಬಸವಳಿದಿದ್ದರು. ಕಾರ್ಯಕ್ರಮ 11 ಗಂಟೆಗೆ ಆರಂಭವಾಗಿದ್ದು ಅಷ್ಟು ಹೊತ್ತಿಗೆ ಸೂರ್ಯನ ಬಿಸಿಲ ಝಳ ಇನ್ನಷ್ಟು ಏರಿತ್ತು. ಕಾರ್ಯಕ್ರಮ ಮುಗಿಯುವ ವೇಳೆಗೆ ಸಮಯ ಮಧ್ಯಾಹ್ನ 12.30 ಆಗಿತ್ತು, ಆದರೆ ಬೆಳಗ್ಗಿನಿಂದ ನಿಂತಿದ್ದ ಮಕ್ಕಳಿಗೆ ಕೂರಲು ಯಾವುದೇ ಆಸನದ ವ್ಯವಸ್ಥೆ ಮಾಡಿರಲಿಲ್ಲ, ಇದರಿಂದ ನಿಂತು ನಿಂತು ವಿದ್ಯಾರ್ಥಿಗಳು ಸುಸ್ತಾಗಿದ್ದರು.
ಇದನ್ನೂ ಓದಿ: ಕೋಟಿ ಕಂಠ ಗಾಯನ ಎಂದು ಕನ್ನಡದ ಕತ್ತು ಸೀಳುವುದಾ? ಕನ್ನಡಿಗರ ಅನ್ನ ಕಸಿದುಕೊಳ್ಳುವುದಾ? ಹಕ್ಕುಗಳಿಗೆ ಮರಣಶಾಸನ ಬರೆಯುವುದಾ?
ಕೋಟಿ ಕಂಠ ಗಾಯನಕ್ಕೆ ಮೊದಲು ಕೆಲವರು ಸಿಕ್ಕ ಸಿಕ್ಕಲ್ಲಿ ನೆರಳಿನ ಆಸರೆಯನ್ನು ಹೇಗೋ ಪಡೆದಿದ್ದರು. ಆದರೆ, ಕಾರ್ಯಕ್ರಮ ಆರಂಭವಾದಾಗ ಬಿಸಿಲಿಗೇ ಬಂದು ನಿಲ್ಲುವಂತಾಯಿತು. ಆದರೆ, ಎರಡು ಹಾಡುವ ಆಗುವಷ್ಟು ಹೊತ್ತಿಗೆ ಮಕ್ಕಳಿಗೆ ನಿಲ್ಲಲಾಗಲೇ ಇಲ್ಲ. ಮೊದಲೇ ಒಂದು ಗಂಟೆ ಬಿಸಿಲು, ನಂತರ ಪ್ರಖರ ಬಿಸಿಲಿಗೆ ಒಳಗಾದ ಅವರು ಹಾಡು ಹಾಡುತ್ತಲೇ ನೆರಳಿನತ್ತ ಓಡಿದರು. ಕೆಲವರು ನಿಂತಲ್ಲೇ ತಲೆಸುತ್ತು ಬಂದು ಕುಳಿತುಕೊಳ್ಳಲು ಮುಂದಾದರು. ಇದು ಮಕ್ಕಳ ಕಥೆಯಷ್ಟೇ ಅಲ್ಲ, ಶಿಕ್ಷಕರು ಕೂಡಾ ಬಿಸಿಲಿಗೆ ನಿಲ್ಲಲಾಗದೆ ನೆರಳಿನತ್ತ ಓಡಿದರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹಚ್ಚೇವು ಕನ್ನಡದ ದೀಪ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗಾಯನಗಳು ಕೇಳಿಬಂದವು.