ಕೊಲೆಗಾರರಿಗೆ ಸಂಬಂಧಪಟ್ಟ ​​ಕಾನೂನನ್ನು ಪ್ರಾಣಿ ಹತ್ಯೆ ಮಾಡುವವರಿಗೆ ಅನ್ವಯಿಸಲು ಸಾಧ್ಯವಿಲ್ಲ: ಹೈಕೋರ್ಟ್

ಕೊಲೆಗಾರರನ್ನು ಶಿಕ್ಷಿಸಲು ಅನ್ವಯವಾಗುವ ಕ್ರಿಮಿನಲ್ ಕಾನೂನುಗಳನ್ನು ಪ್ರಾಣಿಹಂತಕರ ವಿಚಾರಣೆಗೆ ಅನ್ವಯಿಸಬೇಕು ಎಂಬ ವಾದವನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ನಾಯಿಯನ್ನು ಕೊಂದಿದ್ದರಿಂದ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಕೊಲೆಗಾರರನ್ನು ಶಿಕ್ಷಿಸಲು ಅನ್ವಯವಾಗುವ ಕ್ರಿಮಿನಲ್ ಕಾನೂನುಗಳನ್ನು ಪ್ರಾಣಿಹಂತಕರ ವಿಚಾರಣೆಗೆ ಅನ್ವಯಿಸಬೇಕು ಎಂಬ ವಾದವನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ನಾಯಿಯನ್ನು ಕೊಂದಿದ್ದರಿಂದ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.

ಐಪಿಸಿಯ 279 ನೇ ವಿಧಿಯನ್ನು (ನಿರ್ಲಕ್ಷ್ಯದ ಚಾಲನೆಯಿಂದ ಮಾನವನ ಜೀವಕ್ಕೆ ಹಾನಿಯುಂಟುಮಾಡುವುದು) ಪ್ರಾಣಿಗಳಿಗೆ ಉಂಟಾಗುವ ಯಾವುದೇ ಗಾಯ ಅಥವಾ ಸಾವಿಗೆ ಅನ್ವಯಿಸಲು ಸಾಧ್ಯವಾಗುವುದಿಲ್ಲ. ದೂರುದಾರರ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಅಂಗೀಕರಿಸಿದರೆ ವ್ಯಕ್ತಿ ಎಂಬ ಪದವನ್ನು ಪ್ರಾಣಿ ಎಂದು ಅರ್ಥೈಸಬೇಕಾಗುತ್ತದೆ. ಆಗ ಸಾಕುಪ್ರಾಣಿ ಅಥವಾ ಪ್ರಾಣಿಗಳ ಮರಣದ ಸಂದರ್ಭದಲ್ಲಿ ಐಪಿಸಿಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಬೇಕಾುತ್ತದೆ. ಇದು ಐಪಿಸಿಯ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

2018ರಲ್ಲಿ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ನಾಯಿಗೆ ತಾಕಿದ ಪ್ರಕರಣ ರದ್ದು ಕೋರಿ ಜಿ. ಪ್ರತಾಪ್ ಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಪ್ರಾಣಿಗಳ ಅಪಘಾತ ಸಂಭವಿಸಿದಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187 ರ ಅಡಿಯಲ್ಲೂ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ದೂರುದಾರ ಧೀರಜ್ ರಾಖೇಜಾ ಪರ ವಕೀಲರು ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂದಿದ್ದಾರೆ. ಆದರೆ, ಯಾವುದೇ ಪ್ರಾಣಿಯೂ ಮನುಷ್ಯನಿಗಿಂತ ಶ್ರೇಷ್ಠವಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಗೋವಿಂದರಾಜ್, ಐಪಿಸಿಯ ಸೆಕ್ಷನ್ 428 ಅಥವಾ 429 ರ ಅಡಿಯಲ್ಲಿನ ಅಪರಾಧದ ಹಿಂದೆ ಕ್ರಿಮಿನಲ್ ಉದ್ದೇಶವಿರಬೇಕು. ಅಂತಹ ಉದ್ದೇಶವಿಲ್ಲದೆ ಅಥವಾ ಅಪರಾಧವನ್ನು ಮಾಡಲು ಉತ್ಸುಕತೆ ಇಲ್ಲದಿದ್ದಾಗ, ಐಪಿಸಿಯ ಸೆಕ್ಷನ್ 428 ಅಥವಾ ಸೆಕ್ಷನ್ 429 ರ ಅಡಿಯಲ್ಲಿ ಅಪರಾಧ ಸಂಭವಿಸಿದೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು.

ಏನಿದು ಪ್ರಕರಣ

2018ರ ಫೆಬ್ರವರಿ 24ರಂದು ಬೆಳಗ್ಗೆ ನನ್ನ ತಾಯಿ ಎರಡು ಸಾಕು ನಾಯಿಗಳೊಂದಿಗೆ ವಾಯುವಿಹಾರಕ್ಕೆ ತೆರಳಿದ್ದರು. ಈವೇಳೆ ವಾಹನವೊಂದು ನಾಯಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅದು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ಧೀರಜ್ ರಾಖೇಜಾ ಎಂಬುವವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಪೊಲೀಸರು ವಾಹನ ಚಾಲಕ ಪ್ರತಾಪ್ (ಅರ್ಜಿದಾರ) ವಿರುದ್ಧ ಮೋಟಾರು ವಾಹನ ಕಾಯ್ದೆ, 187 ಹಾಗೂ ಐಪಿಸಿ ಸೆಕ್ಷನ್​ 279, 428, 429 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ನಡೆಸಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಪ್ರತಾಪ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com