ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಹಣಕಾಸು ವರ್ಷದಲ್ಲಿ ರೂ. 5,000 ಕೋಟಿ ಮೀಸಲು- ಸಿಎಂ ಬೊಮ್ಮಾಯಿ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ಭಾರಿ ರೂ.1, 500 ಕೋಟಿ ಮೀಸಲಿಡಲಾಗಿದೆ, ಮುಂದಿನ ಹಣಕಾಸು ವರ್ಷದಲ್ಲಿ ರೂ. 5,000 ಕೋಟಿ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 30th October 2022 06:16 PM | Last Updated: 30th October 2022 06:18 PM | A+A A-

ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರರು
ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ಭಾರಿ ರೂ.1, 500 ಕೋಟಿ ಮೀಸಲಿಡಲಾಗಿದೆ, ಮುಂದಿನ ಹಣಕಾಸು ವರ್ಷದಲ್ಲಿ ರೂ. 5,000 ಕೋಟಿ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಲಬುರಗಿಯಲ್ಲಿಂದು ರಾಜ್ಯ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬಿಎಸ್ ಯಡಿಯೂರಪ್ಪ ಬದಲಾಯಿಸಿದರು. ಅವರ ಆಶಯಕ್ಕೆ ತಕ್ಕಂತೆ ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
20 ಸಾವಿರ ಲಂಬಾಣಿ ತಾಂಡಾಗಳ ಮನೆಗಳಿಗೆ ಹಕ್ಕು ಪತ್ರಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿ ವಿತರಿಸುತ್ತಿದ್ದೇವೆ. ಇಷ್ಟು ವರ್ಷ ಲಂಬಾಣಿ ಸಮುದಾಯದವರನ್ನು ಕೇವಲ ಮತ ಹಾಕಲು ಬಳಸಿಕೊಳ್ಳುತ್ತಿದ್ದ ನಾಯಕರ ಬಗ್ಗೆ ನೀವು ಇನ್ಮುಂದೆ ಬಹಳ ಎಚ್ಚರವಾಗಿರಬೇಕು ಎಂದು ಅವರು ತಿಳಿಸಿದರು.
ಕುರಿಗಾಹಿಗಳಿಗೆ 354 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ಕುರುಬ ಸಮುದಾಯಕ್ಕೆ ಸಂಪುಟದಲ್ಲಿಯೂ ಸೂಕ್ತ ಪ್ರಾತಿನಿಧ್ಯ ನೀಡಿದೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಅನುದಾನ ನೀಡುವುದು ದೂರದ ಮಾತಾಗಿತ್ತು. ಸಂಪುಟದಲ್ಲಿ ಒಂದೇ ಒಂದು ಸಚಿವ ಸ್ಥಾನ ಸಹ ನೀಡಿರಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಕರ್ನಾಟಕ, ರಾಜ್ಯ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ, ಕಲಬುರಗಿ.#OBCwithBJPKar pic.twitter.com/xVdfkESPob
— Basavaraj S Bommai (@BSBommai) October 30, 2022
ಕರ್ನಾಟಕದಲ್ಲಿ ಮತ್ತೊಮ್ಮೆ ಜನಪರ ಹಾಗೂ ಕಲ್ಯಾಣ ಸರ್ಕಾರ ರಚನೆಯಾಗಬೇಕು. ಹಿಂದುಳಿದ ವರ್ಗದವರು ತಮ್ಮ ಮತ ಬ್ಯಾಂಕ್ ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಸತ್ಯದರ್ಶನ ಮಾಡಿಸಬೇಕು ಎಂದು ಜನರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.
ಹಿಂದುಳಿದ ವರ್ಗದವರ ಮತ ಪಡೆದುಕೊಂಡು, ಹಿಂದುಳಿದ ವರ್ಗಗಳನ್ನು ಕತ್ತಲಿಟ್ಟು, ಅವರವರ ಕುಟುಂಬಗಳನ್ನು ಅಭಿವೃದ್ಧಿಪಡಿಸಿಕೊಂಡ ನಾಯಕರ ಬದಲಾವಣೆ ಮಾಡುವ ಕಾಲ ಬಹಳ ಸನ್ನಿಹಿತವಾಗಿದೆ ಎಂದರು.