ಟ್ವಿಟರ್ ದೇಶದಲ್ಲಿ ಬ್ಯುಸಿನೆಸ್ ಮಾಡಬಹುದು, ಆದರೆ ಈ ನೆಲದ ಕಾನೂನು ಪಾಲಿಸಬೇಕು: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ದೇಶದಲ್ಲಿ ಬ್ಯುಸಿನೆಸ್ ಮಾಡಬಹುದು. ಆದರೆ ಈ ನೆಲದ ಕಾನೂನನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಶುಕ್ರವಾರ ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ದೇಶದಲ್ಲಿ ಬ್ಯುಸಿನೆಸ್ ಮಾಡಬಹುದು. ಆದರೆ ಈ ನೆಲದ ಕಾನೂನನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಶುಕ್ರವಾರ ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದೆ.

ಕೆಲವರ​ ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಇಂದು ಆಕ್ಷೇಪಣೆ ಸಲ್ಲಿಸಿದ್ದು, ಟ್ವಿಟರ್​ಗೆ ಭಾರತದ ಕಾನೂನು ಉಲ್ಲಂಘಿಸುವ ಚಾಳಿಯಿದೆ ಎಂದು ಹೇಳಿದೆ.

ಸಾರ್ವಭೌಮತೆ, ಸಮಗ್ರತೆ, ರಕ್ಷಣೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಹೊರಡಿಸಲಾದ ನಿರ್ಬಂಧದ ಆದೇಶಗಳನ್ನು ಸಾಮಾಜಿಕ ಜಾಲತಾಣ ಪಾಲಿಸುತ್ತಿಲ್ಲ ಎಂದು ಪ್ರತಿಪಾದಿಸಿದ ಕೇಂದ್ರ ಸರ್ಕಾರ, ನೇರವಾಗಿ ಸಾಧಿಸಲು ಸಾಧ್ಯವಾಗದಿದ್ದಾಗ ಪರೋಕ್ಷವಾಗಿ ಸಾಧಿಸಲು ಇದೊಂದು 'ಅವಕಾಶ ಅಥವಾ ಐಷಾರಾಮಿ ದಾವೆ' ಹೊರತು ಬೇರೇನೂ ಅಲ್ಲ ಎಂದು ಹೇಳಿದೆ.

ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಟ್ವಿಟರ್ ತನ್ನ ಸ್ವಂತ ನೀತಿಗಳಿಗೆ ಸರಿಹೊಂದುವಂತೆ ದೇಶದ ಕಾನೂನುಗಳನ್ನು ಬದಲಾಯಿಸಬೇಕು ಎಂದು ನಿರೀಕ್ಷಿಸುತ್ತಿದೆ. ಟ್ವಿಟರ್ ಅಪಾಯಕಾರಿ ಪ್ರವೃತ್ತಿಯನ್ನು ಪ್ರತಿಪಾದಿಸುತ್ತಿದೆ. ಟ್ವಿಟರ್​ನಂಥ ವೇದಿಕೆಗಳು ಸುಳ್ಳು ಸುದ್ದಿ ಹಾಗೂ ಉದ್ದೇಶಪೂರ್ವಕ ತಪ್ಪು ಮಾಹಿತಿ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಪ್ರಯತ್ನಿಸುತ್ತಿಲ್ಲ. ದೇಶದ ಸಾರ್ವಭೌಮತೆ, ಏಕತೆ, ರಾಷ್ಟ್ರೀಯ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಫೆಬ್ರುವರಿ 2021ರಿಂದ ಫೆಬ್ರುವರಿ 2022ರ ಅವಧಿಯಲ್ಲಿ ಕೇಂದ್ರ ಸರ್ಕಾರವು ನೀಡಿರುವ 10 ನಿರ್ಬಂಧದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಆದೇಶಗಳಲ್ಲಿ ಸರ್ಕಾರವು ಹಲವು ಖಾತೆಗಳನ್ನು ನಿರ್ಬಂಧಿಸುವುದು ಹಾಗೂ ಕೆಲ ಪೋಸ್ಟ್​ಗಳನ್ನು ಮರೆಮಾಚಲು ಸೂಚಿಸಿತ್ತು. ಕೇಂದ್ರ ಸರ್ಕಾರದ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ ಟ್ವಿಟರ್, ಖಾತೆಗಳನ್ನು ನಿರ್ಬಂಧಿಸುವುದು ಸರಿಯಾಗಲಾರದು. ಇದರಿಂದ ಸಂವಿಧಾನವು ಖಾತ್ರಿಪಡಿಸಿರುವ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿತ್ತು. ಕಳೆದ ಜುಲೈ 26ರಂದು ಹೈಕೋರ್ಟ್​ ಟ್ವಿಟರ್​ನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com