ಪೋಕ್ಸೋ ಕೇಸಿನಡಿ ಜೈಲುಪಾಲಾಗಿರುವ ಮುರುಘಾ ಶರಣರಿಗೆ ಮತ್ತಷ್ಟು ಸಂಕಷ್ಟ: ವಂಚನೆ ಕೇಸಿನಲ್ಲಿ ಜಾಮೀನುರಹಿತ ವಾರಂಟ್
ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ಮತ್ತಷ್ಟು ಸಂಕಷ್ಟು ಎದುರಾಗಿದೆ. 2010ರಲ್ಲಿ ಅವರ ವಿರುದ್ಧ ದಾಖಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರ ವಿರುದ್ಧ ಬೆಂಗಳೂರು ನಗರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಮಠದ ಭಕ್ತರಾದ ಪಿಎಸ್ ಪ್ರಕಾಶ್ ಅಲಿಯಾಸ್ ಪಂಚಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸರು ಮುರುಘಾ ಶ್ರೀಗಳು ಮತ್ತು ಆನಂದ್ ಕುಮಾರ್ ಎಂಬ ಇನ್ನೊಬ್ಬ ವ್ಯಕ್ತಿಯ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಮಠ ದೇಶಾದ್ಯಂತ ಆಸ್ತಿ ಹೊಂದಿದೆ. ಬೆಂಗಳೂರು ದಕ್ಷಿಣದ ಕೆಂಗೇರಿ ಹೋಬಳಿಯ ಸೂಳಿಕೆರೆ ಗ್ರಾಮದಲ್ಲಿ 7.18 ಎಕರೆ ಜಮೀನು ಇದೆ ಮಠದ ಅಧ್ಯಕ್ಷರಾಗಿರುವ ಶರಣರು ಈ ಜಮೀನನ್ನು ಆನಂದಕುಮಾರ್‌ಗೆ ಮೋಸದಿಂದ ಮಾರಾಟ ಮಾಡಿದ್ದಾರೆ. ಪ್ರತಿ ಎಕರೆಗೆ ಮಾರುಕಟ್ಟೆ ಮೌಲ್ಯ 1 ಕೋಟಿ ರೂಪಾಯಿಗಳಿದ್ದು, ಮಠಕ್ಕೆ 7 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟು ಮಾಡಿ, ಭೂಮಿಯನ್ನು ಕುಮಾರ್‌ಗೆ 49 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಪೊಲೀಸರು ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ 4ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯವು ನಿನ್ನೆ ಮಠಾಧೀಶ ಮುರುಘಾ ಶರಣರು ಮತ್ತು ಆನಂದ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ, ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ