ಉಡುಪು ಧರಿಸುವುದು ಮೂಲಭೂತ ಹಕ್ಕು ಎಂದು ವಾದಿಸಿದರೆ, ಉಡುಪು ಧರಿಸದೆ ಇರುವುದು ಸಹ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್

ಈ ವಾದವನ್ನು ನಾವು ಅತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಆಗದು. ನೀವು ಉಡುಪು ಧರಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ವಾದಿಸಿದರೆ, ಉಡುಪು ಧರಿಸದೆ ಇರುವುದು ಸಹ ಮೂಲಭೂತ ಹಕ್ಕು ಆಗುತ್ತದೆ’ ಎಂದರು.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಕರ್ನಾಟಕದ ಕೆಲವು ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ಎರಡನೇ ದಿನದ ವಿಚಾರಣೆಯ ವೇಳೆ ಮುಸ್ಲಿಂ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್‌, ‘ಸಂವಿಧಾನದ 19ನೇ (1) (ಎ) (ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಪರಿಚ್ಛೇದದ ಅನುಸಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಸಾರ ತಾವು ಧರಿಸುವ ಉಡುಪನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲರಿಗೆ ಇದೆ’ ಎಂದರು.

ಈ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು, ‘ಈ ವಾದವನ್ನು ನಾವು ಅತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಆಗದು. ನೀವು ಉಡುಪು ಧರಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ವಾದಿಸಿದರೆ, ಉಡುಪು ಧರಿಸದೆ ಇರುವುದು ಸಹ ಮೂಲಭೂತ ಹಕ್ಕು ಆಗುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ದೇವದತ್‌ ಕಾಮತ್‌, ‘ನಾನು ಇಲ್ಲಿ ಕ್ಲೀಷೆಯ ವಾದ ಮಂಡಿಸುತ್ತಿಲ್ಲ. ಇಲ್ಲಿ ನಾನು ಒಂದು ಅಂಶದ ಸಮರ್ಥನೆ ಮಾಡುತ್ತಿದ್ದೇನೆ.  ಉಡುಪು ಧರಿಸದೆ ಶಾಲೆಗಳಿಗೆ ಯಾರೂ ಬರುತ್ತಿಲ್ಲ’ ಎಂದರು.  ಆಗ ನ್ಯಾಯಪೀಠ, ‘ಉಡು‍ಪು ಧರಿಸುವ ಹಕ್ಕನ್ನು ಯಾರೂ ತಿರಸ್ಕರಿಸುತ್ತಿಲ್ಲ’ ಎಂದಿತು.

ವಿದ್ಯಾರ್ಥಿಗಳು ಶಿಕ್ಷಣದ ಹಕ್ಕನ್ನು ಪಡೆಯಲು ಅವರ ಮೂಲಭೂತ ಹಕ್ಕುಗಳನ್ನು ಬಲಿ ಕೊಡಬೇಕೇ ಎಂದು ಪ್ರಶ್ನಿಸಿದ ಕಾಮತ್‌, ‘ವಿದ್ಯಾರ್ಥಿಗಳು ಧರಿಸುವುದು ಬುರ್ಖಾ ಅಲ್ಲ. ಅವರು ಧರಿಸುವುದು ಹಿಜಾಬ್‌. ಇದು ಕೇವಲ ತಲೆಯ ಮೇಲೆ ಹಾಕುವ ಸ್ಕಾರ್ಪ್‌. ಇತರ ಧರ್ಮದ ವಿದ್ಯಾರ್ಥಿಗಳು ಕೂಡ ತಿಲಕ, ರುದ್ರಾಕ್ಷಿ, ಕ್ರಾಸ್‌ ಇತ್ಯಾದಿಗಳನ್ನು ಧರಿಸುತ್ತಿದ್ದಾರೆ’ ಎಂದು ಗಮನ ಸೆಳೆದರು. ಆಗ ನ್ಯಾಯಮೂರ್ತಿಗಳು, ಉಡುಪಿನೊಳಗೆ ಏನು ಧರಿಸುತ್ತಾರೆ ಎಂಬುದರ ಬಗ್ಗೆ ಇಲ್ಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದರು.

ಹೀಗೆ ಮಾತನಾಡುತ್ತಾ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕೋರ್ಟ್‌ ನೀಡಿರುವ ಒಂದು ತೀರ್ಪನ್ನು ಪ್ರಸ್ತಾಪ ಮಾಡಿದರು. ತನ್ನ ಸಾಂಸ್ಕೃತಿಕ ನಂಬಿಕೆಯ ಭಾಗವಾಗಿ  ದಕ್ಷಿಣ ಆಫ್ರಿಕಾದ ಕೋರ್ಟ್‌ ಹಿಂದೂ ಹುಡುಗಿಗೆ ಶಾಲೆಗೆ ಮೂಗುತಿಯನ್ನು ಧರಿಸಿ ಬರಲು ಇತ್ತೀಚೆಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದೆ. ಭಾರತದಲ್ಲಿ ತನ್ನ ನಂಬಿಕೆಯನ್ನು ಶಾಲೆಗಳಲ್ಲಿ ತೋರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು.

ಈ ವಾದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಮೂಗುತಿ ಎನ್ನುವುದು ಎಂದಿಗೂ ಧಾರ್ಮಿಕ ನಂಬಿಕೆಯಲ್ಲ. ಮಂಗಳಸೂತ್ರ ಎನ್ನುವುದು ಧಾರ್ಮಿಕ ನಂಬಿಕೆ ಎಂದು ಹೇಳಿದರು. ಇದಕ್ಕೆ ಕಾಮತ್‌, ಮೂಗುತಿ ಧಾರ್ಮಿಕ ನಂಬಿಕೆ ಎನ್ನುವುದಕ್ಕೆ ನನ್ನಲ್ಲಿ ಹಲವು ಸಾಕ್ಷಿಗಳಿವೆ ಎಂದು ಹೇಳಿದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ, ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮಾತ್ರ ಈ ಸಂಪ್ರದಾಯವಿಲ್ಲ. ಇದು ಎಂದಿಗೂ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com