ಕೃಷಿ ಉತ್ಪಾದಕತೆ ಹೆಚ್ಚಳದಲ್ಲಿ ಬೆಂಗಳೂರು ಕೃಷಿ ವಿವಿ ಪಾತ್ರ ಅನನ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸಿಸಿದರು.
ಬೆಂಗಳೂರು ಕೃಷಿ ವಿವಿ ಘಟಿಕೋತ್ಸವ
ಬೆಂಗಳೂರು ಕೃಷಿ ವಿವಿ ಘಟಿಕೋತ್ಸವ

ಬೆಂಗಳೂರು: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸಿಸಿದರು.

ರಾಜ್ಯಪಾಲರು ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಇಲ್ಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಪ್ರತಿ ವರ್ಷ ಅಖಿಲ ಭಾರತ ಮಟ್ಟದಲ್ಲಿ ಹಮ್ಮಿಕೊಳ್ಳುವ ಜೆ.ಆರ್.ಎಫ್. ಪರೀಕ್ಷೆಯಲ್ಲಿ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಕೃಷಿ ವಿಜ್ಞಾನಿಗಳು ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ ಸತತವಾಗಿ ಪ್ರಥಮ ಸ್ಥಾನ ಗಳಿಸುತ್ತಾ ಬಂದಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಯಾ ಪ್ರದೇಶಕ್ಕೆ ಸೂಕ್ತವಾದ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿ ಕೃಷಿಕರ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ವಿಶ್ವವಿದ್ಯಾಲಯ ಸಹಕಾರಿಯಾಗಿದೆ. ಇಂತಹ ತಂತ್ರಜ್ಞಾನಗಳನ್ನು ಸಕಾಲಕ್ಕೆ ಜಿಲ್ಲೆಗೊಂದರಂತೆ ಇರುವ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ವಿಸ್ತರಣಾ ಶಿಕ್ಷಣಾ ಘಟಕಗಳು ರೈತರಿಗೆ ತಲುಪಿಸುತ್ತಿವೆ. ಆದರೂ ಸಹ ಕೃಷಿ ತಾಂತ್ರಿಕ ವರ್ಗಾವಣೆಯ ವೇಗವನ್ನು ಹೆಚ್ಚಿಸಲು ಈ ಡಿಜಿಟಲ್ ಯುಗದಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸುವುದು ಅವಶ್ಯಕವೆಂದರು.

ಕೃಷಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ. ರೈತರ ಜೊತೆ ರೈತ ಮಹಿಳೆಯರು ಕೈಜೊಡಿಸಿದರೆ ಮಾತ್ರ ರಾಷ್ಟ್ರದ ಅಭಿವೃದ್ಧಿ ಅದರಲ್ಲೂ ಮುಖ್ಯವಾಗಿ ಕೃಷಿ ಅಭಿವೃದ್ದಿ ಸಾಧ್ಯವೆಂದು ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ಸಂಶೋಧನೆ ಹಾಗೂ ಶಿಕ್ಷಣಕ್ಕಾಗಿ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೃಷಿಯ ಅಭಿವೃದ್ಧಿಗೆ, ವಿಶೇಷವಾಗಿ ಒಣಭೂಮಿ ಬೇಸಾಯದ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಅತ್ಯುತ್ತಮ ದರ್ಜೆಯ ಪದವೀಧರರು ಈ ವಿಶ್ವವಿದ್ಯಾನಿಲಯದಿಂದ ಪಾಸ್ ಆಗಿದ್ದು, ಅಂತಹ ವಿದ್ಯಾರ್ಥಿಗಳು ಹಾವರ್ಡ್ ವಿಶ್ವವಿದ್ಯಾನಿಲಯ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮುಂತಾದ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆ ಹಾಗೂ ಭಾರತ ಮತ್ತು ಜಗತ್ತಿನಾದ್ಯಂತ ಉನ್ನತ ಮತ್ತು ಗೌರವಾನ್ವಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com