ಕನಿಷ್ಠ ವೇತನ ನೀಡಿ, ಇಲ್ಲವೇ ಶಿಸ್ತುಕ್ರಮ ಎದುರಿಸಿ: ಇಲಾಖೆಗಳಿಗೆ ರಾಜ್ಯ ಸರ್ಕಾರದ ಆದೇಶ
ಸರ್ಕಾರ ನಿಗದಿಪಡಿಸಿರುವ ಇತ್ತೀಚಿನ ಕನಿಷ್ಠ ವೇತನ ಪ್ರಕಾರ ಹೌಸ್ ಕೀಪಿಂಗ್, ಸೆಕ್ಯುರಿಟಿ ಗಾರ್ಡ್, ಮಲಗುಂಡಿ ಸ್ವಚ್ಛಗೊಳಿಸುವ ಸಫಾಯಿ ಕರ್ಮಚಾರಿಗಳು ಮತ್ತು ಇತರ ಗುತ್ತಿಗೆ ನೌಕರರಿಗೆ ವೇತನ ನೀಡಬೇಕೆಂದು ರಾಜ್ಯ ಕಾರ್ಮಿಕ ಇಲಾಖೆ ಎಲ್ಲಾ ಇಲಾಖೆಗಳು, ಸಾರ್ವಜನಿಕ ವಲಯಗಳು, ವಿಶ್ವ ವಿದ್ಯಾಲಯಗಳು, ನಿಗಮ ಮತ್ತು ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿದೆ.
Published: 09th September 2022 10:17 AM | Last Updated: 09th September 2022 04:38 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ಕಾರ ನಿಗದಿಪಡಿಸಿರುವ ಇತ್ತೀಚಿನ ಕನಿಷ್ಠ ವೇತನ ಪ್ರಕಾರ ಹೌಸ್ ಕೀಪಿಂಗ್, ಸೆಕ್ಯುರಿಟಿ ಗಾರ್ಡ್, ಮಲಗುಂಡಿ ಸ್ವಚ್ಛಗೊಳಿಸುವ ಸಫಾಯಿ ಕರ್ಮಚಾರಿಗಳು (Manual scavengers) ಮತ್ತು ಇತರ ಗುತ್ತಿಗೆ ನೌಕರರಿಗೆ ವೇತನ ನೀಡಬೇಕೆಂದು ರಾಜ್ಯ ಕಾರ್ಮಿಕ ಇಲಾಖೆ ಎಲ್ಲಾ ಇಲಾಖೆಗಳು, ಸಾರ್ವಜನಿಕ ವಲಯಗಳು, ವಿಶ್ವ ವಿದ್ಯಾಲಯಗಳು, ನಿಗಮ ಮತ್ತು ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿದೆ. ಒಂದು ವೇಳೆ ಸರ್ಕಾರ ನಿಯಮ ಪ್ರಕಾರ ವೇತನ ನೀಡುವಲ್ಲಿ ವಿಫಲವಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳು ಗುತ್ತಿಗೆ ನೌಕರರಿಗೆ ನೀಡಬೇಕಾಗಿರುವ ಕನಿಷ್ಠ ವೇತನವನ್ನು ನೀಡುವ ಬಗ್ಗೆ, ವೇತನ ಸಮಯ, ರಜೆ, ಇಎಸ್ಐ ಮತ್ತು ಪಿ ಎಫ್ ಪಾವತಿ ಬಗ್ಗೆ ಸುತ್ತೋಲೆಯಲ್ಲಿ ಒತ್ತಿ ಹೇಳಲಾಗಿದೆ. ಇಲಾಖೆಗಳಿಗೆ ಮಾನವ ಸಂಪನ್ಮೂಲವನ್ನು ಒದಗಿಸುವ ಏಜೆನ್ಸಿಗಳು ಕೂಡ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಭದ್ರತಾ ಏಜೆನ್ಸಿಗಳ ಮೂಲಕ ನೇಮಕಗೊಂಡ ಭದ್ರತಾ ಸಿಬ್ಬಂದಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಕೆಲಸ ಮಾಡುವ ಸ್ಕ್ಯಾವೆಂಜರ್‌ಗಳು ಸೇರಿದ್ದಾರೆ. ಮಾರ್ಗಸೂಚಿಗಳ ಹೊರತಾಗಿಯೂ ಇಲಾಖೆಗೆ ಕನಿಷ್ಠ ವೇತನ ನೀಡುತ್ತಿಲ್ಲ. ಪಾವತಿ ವಿಳಂಬದ ಕುರಿತು ವಿವಿಧ ವಲಯಗಳಿಂದ ದೂರುಗಳು ಬರುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರದ ನಿಯಮ ಪಾಲಿಸದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃಷಿ ಕಾರ್ಮಿಕರು, ಟೈಲರ್‌ಗಳು, ತೋಟಗಾರರು ಮತ್ತು ನೇಕಾರರು ಸೇರಿದಂತೆ ಕಾರ್ಮಿಕ ವರ್ಗದ ಅಡಿಯಲ್ಲಿ ಬರುವ 82 ವರ್ಗಗಳಿಗೆ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಿದೆ. ಕನಿಷ್ಠ ವೇತನವನ್ನು ಐದು ವರ್ಷಗಳಿಗೊಮ್ಮೆ ನಿಗದಿಪಡಿಸಲಾಗುತ್ತದೆ. ಈ ವರ್ಷ ಜುಲೈ ಕೊನೆಯ ವಾರದಲ್ಲಿ ಮಾಡಲಾಗಿದೆ. ಇತ್ತೀಚಿನ ಪರಿಷ್ಕರಣೆಯಂತೆ, ಇದು ತಿಂಗಳಿಗೆ 14 ಸಾವಿರ ರೂಪಾಯಿಗಳಿಂದ 18 ಸಾವಿರ ರೂಪಾಯಿಗಳವರೆಗೆ ಬದಲಾಗುತ್ತದೆ.
ಸುತ್ತೋಲೆಯು ಎಂಟು ಗಂಟೆಗಳ ಕೆಲಸದ ಸಮಯವನ್ನು ಒತ್ತಿಹೇಳುತ್ತದೆ. ಉದ್ಯೋಗದಾತರು ದಿನಕ್ಕೆ ಎಂಟು ಗಂಟೆಗಳಿಗಿಂತ ಕಡಿಮೆ ಕೆಲಸ ಮಾಡಿದರೆ, ಅವರು ಗಂಟೆಯ ಆಧಾರದ ಮೇಲೆ ವೇತನವನ್ನು ಪಾವತಿಸಲು ಅವಕಾಶವನ್ನು ಹೊಂದಿರುತ್ತಾರೆ. ಕಾರ್ಮಿಕರನ್ನು ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ಪ್ರತಿ ಹೆಚ್ಚುವರಿ ಗಂಟೆಗೆ ಅವರಿಗೆ ಹೆಚ್ಚಿನ ವೇತನ ನೀಡಬೇಕು. ಅಲ್ಲದೆ ಒಂದು ತಿಂಗಳಲ್ಲಿ ಕಾರ್ಮಿಕರಿಗೆ ನಾಲ್ಕು ದಿನ ರಜೆ ನೀಡಬೇಕು. ಮಾಲೀಕರು ತಮ್ಮ ರಜೆಯ ದಿನಗಳಲ್ಲಿ ಕಾರ್ಮಿಕರನ್ನು ಕೆಲಸ ಮಾಡಿಸಿದರೆ ಅವರಿಗೆ ಪರಿಹಾರ ನೀಡಬೇಕು.
ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು ಎಂದು ಸುತ್ತೋಲೆಯಲ್ಲಿ ಸೇರಿಸಲಾಗಿದೆ. ಅಲ್ಲದೆ, ಉದ್ಯೋಗದಾತರು ತಮ್ಮ ಪಾಲಿನ ಇಎಸ್‌ಐ ಮತ್ತು ಭವಿಷ್ಯ ನಿಧಿಯನ್ನು ಕಾರ್ಮಿಕರಿಗೆ ಪ್ರತಿ ತಿಂಗಳು ಪಾವತಿಸಬೇಕು. ಅದರ ದಾಖಲೆಗಳನ್ನು ನಿರ್ವಹಿಸಬೇಕು. ಉದ್ಯೋಗದಾತರು ತಮ್ಮ ಕಾರ್ಮಿಕರಿಗೆ ಬಯೋ-ಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.