ಬೆಳಗಾವಿ: ಭಾರೀ ಮಳೆಯಿಂದ ಆರು ಸೇತುವೆಗಳು ಜಲಾವೃತ, ಸಂಪರ್ಕ ಕಡಿತ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೃಷ್ಣಾ ನದಿ ಮತ್ತು ಅದರ ಉಪನದಿಗಳ ಮೇಲಿನ ಆರು ಸೇತುವೆಗಳು ಜಲಾವೃತಗೊಂಡಿವೆ. ನೀರಿನ ಒಳಹರಿವು ಹೆಚ್ಚಾದಂತೆ ನದಿ ದಡದಲ್ಲಿರುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.
ಹುಕ್ಕೇರಿಯಲ್ಲಿ ಜಲಾವೃತಗೊಂಡ ಸೇತುವೆ ಚಿತ್ರ
ಹುಕ್ಕೇರಿಯಲ್ಲಿ ಜಲಾವೃತಗೊಂಡ ಸೇತುವೆ ಚಿತ್ರ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೃಷ್ಣಾ ನದಿ ಮತ್ತು ಅದರ ಉಪನದಿಗಳ ಮೇಲಿನ ಆರು ಸೇತುವೆಗಳು ಜಲಾವೃತಗೊಂಡಿವೆ. ನೀರಿನ ಒಳಹರಿವು ಹೆಚ್ಚಾದಂತೆ ನದಿ ದಡದಲ್ಲಿರುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.

ಘಟಪ್ರಭಾ ನದಿಯ ಹಿಡಕಲ್ ಜಲಾಶಯ ಮತ್ತು ಬೆಳಗಾವಿ ಜಿಲ್ಲೆಯ ನವಿಲತೀರ್ಥ ಜಲಾಶಯಗಳು ಬಹುತೇಕ ಪೂರ್ಣ ಸಾಮರ್ಥ್ಯವನ್ನು ತಲುಪಿವೆ. ಭಾನುವಾರ ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಯ ಬಿಡಲಾಗಿದೆ. ಮಳೆ ಮುಂದುವರಿದರೆ ನೀರಿನ ಮಟ್ಟ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಮಲಪ್ರಭಾ ನದಿಗೆ ಭಾನುವಾರ ಸುಮಾರು 4 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇತ್ತು. ಮಲಪ್ರಭಾ ಅಣೆಕಟ್ಟಿನ ಒಳಹರಿವು ಹೆಚ್ಚಾಗುತ್ತಿದ್ದು, ಅಣೆಕಟ್ಟು ಪೂರ್ಣ ಸಾಮರ್ಥ್ಯವನ್ನು ತಲುಪುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಆರು ಸೇತುವೆಗಳು ಜಲಾವೃತ: ಚಿಕ್ಕೋಡಿ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ಕೃಷ್ಣಾ ನದಿ ಜಲಾನಯನ ಪ್ರದೇಶದ ಆರು ಸೇತುವೆಗಳು ಜಲಾವೃತಗೊಂಡಿವೆ.  ನಿಪ್ಪಾಣಿ ತಾಲೂಕಿನ ಅಕ್ಕೋಳ-ಸಿದ್ನಾಳ,  ಕುನ್ನೂರು- ಬೋಜವಾಡ, ಕುನ್ನೂರ-ಬೋರವಾಡ, ಭಿವಶಿ-ಜತ್ರತ್ ಗ್ರಾಮಗಳ ನಡುವೆ ಇರುವ ಸೇತುವೆಗಳು ಮುಳುಗಡೆಯಾಗಿವೆ.

 ಗೋಕಾಕ ತಾಲೂಕಿನ ಲೋಳಸೂರು ಸೇತುವೆ, ಹುಕ್ಕೇರಿ ತಾಲೂಕಿನ ಹುಕ್ಕೇರಿ-ಯರನಾಳ ಸೇತುವೆ ನದಿ ನೀರಿನಲ್ಲಿ ಮುಳುಗಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸ್ ಅಧಿಕಾರಿಗಳು ಬ್ಯಾರಿಕೇಡ್‌ಗಳಿಂದ ಈ ರಸ್ತೆಗಳನ್ನು ಮುಚ್ಚಿದ್ದಾರೆ ಮತ್ತು ಪೊಲೀಸರನ್ನು ನಿಯೋಜಿಸಿದ್ದಾರೆ.

ಗೋಡೆ ಕುಸಿತ:  ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ಗೋಡೆ ಕುಸಿದು 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.ಮೃತ ಮಹಿಳೆಯನ್ನು ಸವದತ್ತಿ ತಾಲೂಕಿನ ಹುಲುಕಟ್ಟಿ ಗ್ರಾಮದ ನಿವಾಸಿ ಗಂಗವ್ವ ರಾಮಣ್ಣ ಮೂಲಿಮನಿ (55) ಎಂದು ಗುರುತಿಸಲಾಗಿದೆ.

ಮೂಲಿಮನಿ ಅವರು ಮಲಗಿದ್ದ ಹಳೆಯ ಮನೆಯ ಗೋಡೆ ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ  ಕುಸಿದು ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಮೂಲಿಮನಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಸೌಂದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com