ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಬಳ್ಳಾರಿಯ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್) ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ, ವಿದ್ಯುತ್ ವ್ಯತ್ಯಯದಿಂದ ವೆಂಟಲೇಟರ್ ಗಳು ಸ್ಥಗಿತಗೊಂಡು ಮೃತಪಟ್ಟ ಮೂವರು ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ...
Published: 15th September 2022 07:18 PM | Last Updated: 15th September 2022 08:44 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬಳ್ಳಾರಿಯ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್) ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ, ವಿದ್ಯುತ್ ವ್ಯತ್ಯಯದಿಂದ ವೆಂಟಲೇಟರ್ ಗಳು ಸ್ಥಗಿತಗೊಂಡು ಮೃತಪಟ್ಟ ಮೂವರು ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಘೋಷಿಸಿದ್ದಾರೆ.
ವಿದ್ಯುತ್ ವ್ಯತ್ಯಯದಿಂದ ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಿಮ್ಸ್ನ ವೆಂಟಿಲೇಟರ್ಗಳಲ್ಲಿ ಸಮಸ್ಯೆ ಉಂಟಾಗಿ ರೋಗಿಗಳು ಮೃತಪಟ್ಟ ವಿಚಾರ ಇಂದು ವಿಧಾನಸಭೆ ಕಲಾಪದಲ್ಲೂ ಪ್ರತಿಧ್ವನಿಸಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಇದು ಸರ್ಕಾರದ ತಪ್ಪಿನಿಂದ ಆಗಿರುವ ಅನಾಹುತ. ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳದಿದ್ದುದು ತಪ್ಪು. ಸರ್ಕಾರ ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು: ವಿಧಾನಸಭೆಯಲ್ಲಿ ತೀವ್ರ ಕೋಲಾಹಲ, ಆರೋಗ್ಯ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಆರೋಗ್ಯ ಸಚಿವ ಡಾ ಸುಧಾಕರ್ ಅನಾರೋಗ್ಯ ಕಾರಣ ಕಲಾಪಕ್ಕೆ ಹಾಜರಾಗದ ಕಾರಣ ಅವರ ಪರವಾಗಿ ಉತ್ತರಿಸಿದ ಸಚಿವ ಶ್ರೀರಾಮುಲು, ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಐಸಿಯುನಲ್ಲಿ ಇದ್ದವರು ಕೇವಲ ವೆಂಟಿಲೇಟರ್ ವೈಫಲ್ಯದಿಂದಷ್ಟೇ ಮೃತಪಟ್ಟಿಲ್ಲ. ಅವರ ಸಾವಿಗೆ ಬೇರೆ ಕಾರಣಗಳು ಇವೆ. ನಾನು ಆಸ್ಪತ್ರೆಯ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೌಲಾ ಹುಸೇನ್(35) ಹಾಗೂ ಹಾವು ಕಡಿತಕ್ಕೆ ಒಳಗಾದ ಚೆಟ್ಟೆಮ್ಮ(30) ಬುಧವಾರ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ವೆಂಟಲೇಟರ್ ಗಳು ಸ್ಥಗಿತಗೊಂಡು ಅಥವಾ ಬ್ಯಾಕ್‌ಅಪ್ ಇಲ್ಲದೆ ಸಾವು ಸಂಭವಿಸಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ ವರದಿಗಳನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.