ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆ, ಬಿಜೆಪಿ ಸರ್ಕಾರವು ವಿವಾದಾತ್ಮಕ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಮಸೂದೆ 2022 ನ್ನು ಅಂಗೀಕರಿಸಿದೆ, ಇದು ಬಲವಂತದ ಮತಾಂತರ ವಿರೋಧಿ ಮಸೂದೆ (anti-conversion Bill) ಎಂದು ಜನಪ್ರಿಯವಾಗಿದೆ. ಜನರನ್ನು ಬಲವಂತವಾಗಿ ಮತಾಂತರಕ್ಕೆ ದೂಡಿದರೆ ಅಥವಾ ಪ್ರೇರೇಪಿಸಿದರೆ ಜಾಮೀನು ರಹಿತ ಮತ್ತು ಶಿಕ್ಷಾರ್ಹ ಅಪರಾಧವಾಗುತ್ತದೆ. ರಾಜ್ಯ ವಿಧಾನ ಪರಿಷತ್ ನಲ್ಲಿ ನಿನ್ನೆ ಇದಕ್ಕೆ ಅಂಗೀಕಾರ ಸಿಕ್ಕಿದೆ.
ಇಂತಹ ಕಾನೂನನ್ನು ಜಾರಿಗೊಳಿಸಿದ ದೇಶದ ಹತ್ತನೇ ರಾಜ್ಯ ಕರ್ನಾಟಕವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಈ ಮಸೂದೆಗೆ ಸುಲಭವಾಗಿ ಅಂಗೀಕಾರ ಸಿಕ್ಕಿತ್ತು. ಆದರೆ ಆಡಳಿತಾರೂಢ ಬಿಜೆಪಿಗೆ ಮೇಲ್ಮನೆಯಲ್ಲಿ ಮಸೂದೆಯನ್ನು ಅಂಗೀಕರಿಸಲು ಸಂಖ್ಯಾಬಲದ ಕೊರತೆಯಿಂದಾಗಿ ನಿನ್ನೆ ಕೌನ್ಸಿಲ್‌ನಲ್ಲಿ ಮಂಡಿಸಲಾಯಿತು. ಇತ್ತೀಚೆಗೆ ನಡೆದ ಪರಿಷತ್ತಿನ ಚುನಾವಣೆಯ ನಂತರ ಬಿಜೆಪಿ ಬಹುಮತ ಗಳಿಸಿದೆ. ಈ ವರ್ಷದ ಮೇನಲ್ಲಿ, ಸರ್ಕಾರವು ಸುಗ್ರೀವಾಜ್ಞೆಯನ್ನು ಪ್ರಕಟಿಸಿತು, ಇದನ್ನು ಪ್ರತಿಪಕ್ಷಗಳು ಟೀಕಿಸಿದ್ದವು.
ಮಸೂದೆ ಜಾರಿಯಿಂದ ಅಪರಾಧಗಳಿಗೆ ಕನಿಷ್ಠ ಜೈಲು ಶಿಕ್ಷೆ ಮೂರು ವರ್ಷಗಳಾಗಿದ್ದು, 25,000 ರೂಪಾಯಿಗಳಿಂದ 2 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲಾಗುತ್ತದೆ. ಕಾನೂನುಬಾಹಿರ ಮತಾಂತರದ ಏಕೈಕ ಉದ್ದೇಶದೊಂದಿಗಿನ ವಿವಾಹವಾದರೆ ಅದನ್ನು ನ್ಯಾಯಾಲಯಗಳು ಅನೂರ್ಜಿತ ಎಂದು ಘೋಷಿಸುತ್ತದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಿನ್ನೆ ವಿಧಾನ ಪರಿಷತ್ ನಲ್ಲಿ ಐದು ಗಂಟೆಗಳ ಸುದೀರ್ಘ ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಲು ಪ್ರಸ್ತಾಪಿಸಿದಾಗ ಸದನವು ತೀವ್ರ ಕೋಲಾಹಲ, ಗದ್ದಲಗಳಿಗೆ ಸಾಕ್ಷಿಯಾಯಿತು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕೆಲವು ಕಾಂಗ್ರೆಸ್ ಸದಸ್ಯರು ವಿಧೇಯಕದ ಪ್ರತಿಗಳನ್ನು ಹರಿದು ಹಾಕಿ, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಪ್ರಜಾಸತ್ತಾತ್ಮಕವಾಗಿಲ್ಲ ಎಂದು ಆರೋಪಿಸಿ ಸಭಾತ್ಯಾಗ ನಡೆಸಿದರು.
ಹೊಸ ಕಾನೂನು ಧರ್ಮ ಆಯ್ಕೆ ಮಾಡಿಕೊಳ್ಳುವುದನ್ನು ತಡೆಯುವುದಿಲ್ಲ: ಬೊಮ್ಮಾಯಿ
ಇತ್ತೀಚಿನ ವರ್ಷಗಳಲ್ಲಿ ರಾಜ್ಯವು ಆಮಿಷ, ಬಲವಂತ, ಮೋಸದ ವಿಧಾನಗಳಿಂದ ಮತಾಂತರಗೊಳ್ಳುವ ಮತ್ತು ಸಾಮೂಹಿಕ ಮತಾಂತರದ ಅನೇಕ ನಿದರ್ಶನಗಳಿಗೆ ಸಾಕ್ಷಿಯಾಗಿದೆ. ಘಟನೆಗಳು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನು ಉಂಟುಮಾಡಿವೆ. ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನು ಉಂಟುಮಾಡುವ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಅಂತಹ ಮತಾಂತರದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸಲು ಪ್ರಸ್ತುತ ರಾಜ್ಯದಲ್ಲಿ ಯಾವುದೇ ಕಾನೂನು ಅಸ್ತಿತ್ವದಲ್ಲಿಲ್ಲ.
ಇತರ ಧರ್ಮಗಳಿಗೆ ಅನೇಕ ದಲಿತರು ಮತಾಂತರಗೊಂಡ ನಂತರವೂ ದಲಿತರಿಗೆ ಒದಗಿಸಲಾದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ನೀಡಲಾಗುವ ಸವಲತ್ತುಗಳನ್ನು ಸಹ ಅನುಭವಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ದಲಿತರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಇಂತಹ ವ್ಯಕ್ತಿಗಳು ಕಿತ್ತುಕೊಳ್ಳುವುದನ್ನು ಹೊಸ ಕಾನೂನು ತಡೆಯುತ್ತದೆ ಎಂದರು.
ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಪ್ರತಿಪಕ್ಷದ ಸದಸ್ಯರು ಮಸೂದೆಯನ್ನು 'ಅಸಂವಿಧಾನಿಕ' ಎಂದು ಕರೆದರು. ಇದು ಸಂವಿಧಾನವು ಖಾತರಿಪಡಿಸುವ ಜನರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುತ್ತದೆ, ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೇಲ್ಮನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಹರಿಪ್ರಸಾದ್ ಸೇರಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಮಸೂದೆಯು ಸಮಾನತೆಯ ವಿರುದ್ಧದ ಪಿತೂರಿಯಾಗಿದೆ ಮತ್ತು ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸುತ್ತದೆ ಎಂದು ಪ್ರತಿಪಕ್ಷ ನಾಯಕರ ವಾದವಾಗಿತ್ತು.
ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಗುಪ್ತ ಅಜೆಂಡಾ ಎಂದರು. ದೇಶದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯು ಕ್ಷೀಣಿಸುತ್ತಿದೆ. 2001 ಮತ್ತು 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯು ಕ್ರಮವಾಗಿ 2.34% ಮತ್ತು 2.30% ಮತ್ತು ಕರ್ನಾಟಕದಲ್ಲಿ 1.91% ಮತ್ತು 1.87% ಆಗಿದೆ. ತಮ್ಮ ಧರ್ಮದಲ್ಲಿ ಸಮಾನತೆ ಮತ್ತು ಗೌರವವಿಲ್ಲ ಎಂದು ಭಾವಿಸುವವರು ಅದನ್ನು ಬಿಟ್ಟು ಬೇರೆ ಧರ್ಮವನ್ನು ಸ್ವೀಕರಿಸುತ್ತಾರೆ. ಅವರಿಗೆ ಬೇಕಾದ ಧರ್ಮವನ್ನು ಆರಿಸಿಕೊಳ್ಳುವುದನ್ನು ನೀವು ಏಕೆ ತಡೆಯಬೇಕು ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಹೊಸ ಕಾನೂನು ಯಾವುದೇ ಧರ್ಮವನ್ನು ಆಯ್ಕೆ ಮಾಡುವುದನ್ನು ತಡೆಯುವುದಿಲ್ಲ ಆದರೆ ಬಲವಂತದ ಮತಾಂತರ ಮತ್ತು ಆಮಿಷದ ಮೂಲಕ ಮಾಡುವ ಮತಾಂತರವನ್ನು ಮಾತ್ರ ನಿಷೇಧಿಸುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಇದು ಮತಾಂತರ ವಿರೋಧಿ ಮಸೂದೆಯಲ್ಲ, ಆದರೆ ಧರ್ಮಗಳನ್ನು ರಕ್ಷಿಸುವ ಮಸೂದೆ ಎಂದು ಹೇಳಿದರು.
ಶಿಕ್ಷೆ: -ಮತಾಂತರ ವಿರೋಧಿ ಮಸೂದೆಯಡಿ, ಮೊದಲ ಬಾರಿಯ ಅಪರಾಧಕ್ಕೆ 25,000 ರೂಪಾಯಿ ದಂಡದೊಂದಿಗೆ 3 ವರ್ಷದಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ.
-ಅಪ್ರಾಪ್ತ ವಯಸ್ಕರು, ಅಸ್ವಸ್ಥ ಮನಸ್ಸಿನ ವ್ಯಕ್ತಿಗಳು, ಮಹಿಳೆಯರು ಅಥವಾ ಎಸ್‌ಸಿ/ಎಸ್‌ಟಿಗೆ ಸೇರಿದ ವ್ಯಕ್ತಿಗಳನ್ನು ಮತಾಂತರಿಸಿದರೆ 50,000 ದಂಡದೊಂದಿಗೆ 3 ವರ್ಷದಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ.
-ಸಾಮೂಹಿಕ (ಎರಡು ಅಥವಾ ಅದಕ್ಕಿಂತ ಹೆಚ್ಚು) ಪರಿವರ್ತನೆಗಾಗಿ 1 ಲಕ್ಷ ರೂಪಾಯಿ ದಂಡದೊಂದಿಗೆ 3 ವರ್ಷದಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ
-ಎರಡನೇ ಬಾರಿ ಅಪರಾಧಕ್ಕೆ 2 ಲಕ್ಷ ರೂಪಾಯಿ ದಂಡದೊಂದಿಗೆ 5 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ.
Advertisement