ಬಿಬಿಎಂಪಿಯ ಆಪರೇಷನ್‌ ಡೆಮಾಲಿಷನ್: 5ನೇ ದಿನವೂ ಜೆಸಿಬಿಗಳ ಘರ್ಜನೆ; 11 ಕಡೆ ಒತ್ತುವರಿ ತೆರವು

ಬೆಂಗಳೂರು ಮಹಾನಗರ ಪಾಲಿಕೆ 5ನೇ ದಿನವೂ ಒತ್ತುವರಿ ಕಾರ್ಯವನ್ನು ಮುಂದುವರಿಸಿದ್ದು, ದಾಸರಹಳ್ಳಿ ಮತ್ತು ಯಲಹಂಕ ವಲಯಗಳಲ್ಲಿ 11 ಕಡೆ ಒತ್ತುವರಿ ತೆರವುಗೊಳಿಸಿದೆ.
ದಾಸರಹಳ್ಳಿಯಲ್ಲಿ ಒತ್ತುವರಿ ತೆರವು
ದಾಸರಹಳ್ಳಿಯಲ್ಲಿ ಒತ್ತುವರಿ ತೆರವು

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ 5ನೇ ದಿನವೂ ಒತ್ತುವರಿ ಕಾರ್ಯವನ್ನು ಮುಂದುವರಿಸಿದ್ದು, ದಾಸರಹಳ್ಳಿ ಮತ್ತು ಯಲಹಂಕ ವಲಯಗಳಲ್ಲಿ 11 ಕಡೆ ಒತ್ತುವರಿ ತೆರವುಗೊಳಿಸಿದೆ.

ಮಳೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಮಹದೇವಪುರ ವಲಯದಲ್ಲಿ ತೆರವು ಕಾರ್ಯ ನಡೆಸದೇ ಕೇವಲ ಸರ್ವೇ ಕಾರ್ಯ ನಡೆಸಿರುವುದು ಹಲವರನ್ನು ಆಶ್ಚರ್ಯಗೊಳಿಸಿದೆ. ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಕಳೆದ ಗುರುವಾರ 11 ಕಡೆ ಒತ್ತುವರಿ ತೆರವು ಮಾಡಲಾಗಿತ್ತು, ಶುಕ್ರವಾರವೂ ಅದೇ ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆಸಿ ರಾಜಕಾಲುವೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು.

ಬಿಬಿಎಂಪಿ ಪ್ರಕಾರ ನೆಲಗಡರನಹಳ್ಳಿ ರಸ್ತೆ, ರುಕ್ಮಿಣಿ ನಗರ ಮತ್ತು ದಾಸರಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ 3 ಕ್ವಾರ್ಟರ್ ಗುಂಟೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಾಗಿದ್ದು, ಕೆಲವೆಡೆ ನಿವಾಸಿಗಳು ತಾವೇ ಒತ್ತುವರಿ ತೆರವುಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಿವಾಸಿಗಳು ಕೈಗೊಂಡಿರುವ ತೆರವಿಗೆ ನಿಗಾ ಇಡುವಂತೆ ಪಾಲಿಕೆ ಹಿರಿಯ ಅಧಿಕಾರಿಗಳು ಸ್ಥಳೀಯ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಯಲಹಂಕ ವಲಯ ಕುವೆಂಪುನಗರ ವಾರ್ಡ್‌ ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಲ್ಯಾಂಡ್‌ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಿಂಗಾಪುರ ಬಡಾವಣೆಯಲ್ಲಿ ರಾಜಕಾಲುವೆ ನಿರ್ಮಿಸುವುದಾಗಿ ಬಿಬಿಎಂಪಿ ತಿಳಿಸಿದೆ.

ಮಹದೇವಪುರ ವಲಯದಲ್ಲಿ ಭೂಮಾಪಕ ಇಲಾಖೆ ಹಾಗೂ ಕಂದಾಯ ಇಲಾಖೆಯ ತಹಸೀಲ್ದಾರ್‌ ನೇತೃತ್ವದಲ್ಲಿ ವಾಗ್ದೇವಿ ಮುನ್ನೇಕೊಳಲು, ಕಸವನಹಳ್ಳಿ, ದೊಡ್ಡಕನ್ನಹಳ್ಳಿಯಲ್ಲಿ ಬರುವ ಎ.ಬಿ.ಕೆ ವಿಲೇಜ್‌, ಪ್ರೆಸ್ಟೀಜ್‌ ಟೆಕ್‌ ಪಾರ್ಕ್, ವಿಪ್ರೋ, ಸನ್ನೀ ಬ್ರೂಕ್ಸ್‌, ಬೆಳತ್ತೂರು, ಸಾದರಮಂಗಲ, ಬಿಲ್ಲಿನೇನಿ ಸಾಸ ಅಪಾರ್ಟ್ ಮೆಂಟ್‌ನ ಒಳ ಪ್ರದೇಶ, ಸಾಯಿ ಗಾರ್ಡನ್‌ ಬಡಾವಣೆ, ವರ್ತೂರಿನಿಂದ ಶೀಲವಂತನ ಕೆರೆ ಸೇರಿದಂತೆ ಇನ್ನಿತರೆ ಕಡೆ ಸರ್ವೇ ಕಾರ್ಯ ನಡೆಸಿ ಮಾರ್ಕಿಂಗ್‌ ಮಾಡಲಾಯಿತು.

ಸರ್ವೇ ಕಾರ್ಯ ನಡೆಸುವ ವೇಳೆ ನಿವೇಶನ ಮತ್ತು ಕಾಂಪೌಂಡ್‌ಗಳಿದ್ದರೆ ತಕ್ಷಣ ತೆರವುಗೊಳಿಸಲಾಗುತ್ತದೆ. ಒಂದು ವೇಳೆ ಕಟ್ಟಡವಿದ್ದು, ಅದರಲ್ಲಿ ಜನರು ವಾಸವಿದ್ದರೆ ನೋಟಿಸ್‌ ನೀಡಿ ತೆರವುಗೊಳಿಸಲಾಗುವುದು ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ್‌ ಕಬಾಡೆ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com