ಎಸ್ಸಿ, ಎಸ್ಟಿಯವರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ  ವಿದ್ಯುತ್ ನೀಡುವ ಯೋಜನೆಯನ್ನು ಹಿಂಪಡೆದಿಲ್ಲ. ಇನ್ನಷ್ಟು ಸರಳೀಕರಣ ಮಾಡಿ ಇದೇ ತಿಂಗಳಿನಿಂದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ...
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ  ವಿದ್ಯುತ್ ನೀಡುವ ಯೋಜನೆಯನ್ನು ಹಿಂಪಡೆದಿಲ್ಲ. ಇನ್ನಷ್ಟು ಸರಳೀಕರಣ ಮಾಡಿ ಇದೇ ತಿಂಗಳಿನಿಂದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಭಾನುವಾರ ಹೇಳಿದ್ದಾರೆ.

ಇಂದು ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಸ್ಮಾ ದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ 43ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಸಿಲು, ಗಾಳಿ, ಮಳೆ ಎನ್ನದೇ ಬಹಳ ಕಠಿಣ ಪರಿಶ್ರಮದಿಂದ ದುಡಿಯುವುದು ಈ ಭೋವಿ ಸಮಾಜದ ಮೂಲ ಗುಣ. ಈ ಸಮಾಜದೊಂದಿಗೆ ನಮ್ಮದು‌ 30 ವರ್ಷದ  ಸಂಬಂಧವಿದೆ.‌ ನಮ್ಮ ತಂದೆಯವರೊಂದಿಗೆ ಈ ಸಮಾಜ ಅನೋನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಜಿ.ಎಸ್ ಬಿಳಗಿಯವರು, ಶಿವಮೊಗ್ಗದಲ್ಲಿ ಜಿ‌. ಬಸವಣ್ಣಪ್ಪ ಮಂತ್ರಿಯಾಗಿದ್ದರು. ಇವರು ನಮ್ಮ ತಂದೆಯವರೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು.

ಬೆಂಗಳೂರಿನಲ್ಲಿ ಇಬ್ಬರು ಈ ಸಮಾಜದಿಂದ ಶಾಸಕರಾಗಿರುವುದು ಹೆಮ್ಮೆಯ ವಿಚಾರ. ಅರವಿಂದ ಲಿಂಬಾವಳಿ ಮತ್ತು ರಘು ಅವರು ನಿರಂತರವಾಗಿ ಮೂರು ಬಾರಿ ಗೆದ್ದು ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರ. ಅಖಂಡ ಶ್ರೀನಿವಾಸಮೂರ್ತಿ ಬೇರೆ ಪಕ್ಷದಲ್ಲಿದ್ದರು ಕೂಡ ನನಗೆ ಬಹಳ ಆತ್ಮೀಯರು ಎಂದು ನುಡಿದರು.

ಈ ಸಮಾಜದ ಏಳಿಗೆ ಎಂದರೆ ಈ ರಾಜ್ಯದ ಏಳಿಗೆ. ನನ್ನ ಲಕ್ಷ್ಯ, ನನ್ನ ಕಾರ್ಯಕ್ರಮ, ಯೋಜನೆ  ನಮ್ಮ ರಾಜ್ಯದ ದುಡಿಯುವ ವರ್ಗಕ್ಕೆ ಮೀಸಲಾಗಿದೆ. ಒಂದು ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು. ‌ಈಗ ಬದಲಾವಣೆ ಆಗಿದೆ. ಈಗ ದುಡಿಮೆಯೇ ದೊಡ್ಡಪ್ಪ. ದುಡಿಮೆಯೇ ಭೋವಿ ಜನಾಂಗದ ಕುಲ ಕಸಬು, ಕುಲ ದೇವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿದ್ದರಾಮೇಶ್ವರರು ಬಹಳ ದೊಡ್ಡ ಶರಣರು. ಅವರ ವಚನಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಕೇವಲ ವಚನಗಳನ್ನು ಮಾತ್ರ ಅವರು ಬರೆದಿಲ್ಲ. ಅವರು ಅತ್ಯಂತ ಕಠಿಣ ಪರಿಶ್ರಮಿಯಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ದೇವಸ್ಥಾನಗಳನ್ನು ಕಟ್ಟಿಸಿದರು. ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಸಿದ್ದರಾಮೇಶ್ವರರನ್ನು ಬಸವಣ್ಣನವರು ಅನುಭವ ಮಂಟಪದ ಶೂನ್ಯ ಸಿಂಹಾಸನದಲ್ಲಿ ಕಾರ್ಯದರ್ಶಿಯಾಗಿ ನೇಮಿಸಿದರು. ಐತಿಹಾಸಿಕವಾಗಿ ಅತ್ಯಂತ ಶ್ರೇಷ್ಠವಾಗಿರುವ ವಿಚಾರಧಾರೆಗೆ ಈ ಕುಲ ಸೇರಿದೆ ಎಂದು ಬೊಮ್ಮಾಯಿ‌ ಹೇಳಿದರು.

ಕಾಲ ಬದಲಾವಣೆ ಆಗಿದೆ. ಎಲ್ಲರೂ ಕುಲ ಕಸುಬನ್ನೇ ಮಾಡಬೇಕು ಅಂತ ಏನಿಲ್ಲ. 21 ಶತಮಾನ ಜ್ಞಾನದ ಶತಮಾನ. ಜ್ಞಾನ, ವಿದ್ಯೆಯನ್ನು ಪಡೆದುಕೊಂಡರೆ ಎಲ್ಲ ರಂಗದಲ್ಲಿಯೂ ಕೂಡ ಮುಂದೆ ಬರಬಹುದು. ಇಲ್ಲಿರುವ ಮಕ್ಕಳು ತೆಗೆದುಕೊಂಡಿರುವ ಅಂಕಗಳನ್ನು ನೋಡಿ ನನಗೆ ಹೆಮ್ಮೆಯಾಯಿತು. ಸಮಾಜದ ಮಕ್ಕಳಲ್ಲಿ ಬುದ್ಧಿವಂತಿಕೆ, ಜ್ಞಾನದ ಭಂಡಾರವಿದೆ. ಅವರಿಗೆ ಅವಕಾಶ ಕೊಟ್ಟರೆ ಮುಂದೆ ಬರುತ್ತಾರೆ. ಈ ಸಮಾಜ ಐಟಿ-ಬಿಟಿ, ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಮುಂದೆ ಬರಬೇಕು ಎನ್ನುವುದು ನನ್ನ ಅಸೆ. ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು ಎಂದು ಸಿಎಂ ಬೊಮ್ಮಾಯಿ ನುಡಿದರು.

ನಮ್ಮ ಸರ್ಕಾರ ನಿಮ್ಮ ಕಸಬಿಗೆ ಏನೇನು ಕಾನೂನು ಅಡಚಣೆಯಿದೆ ಅದನ್ನು ದೂರ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಮಕ್ಕಳಿಗೆ ಈಗಾಗಲೇ ವಿದ್ಯಾವೇತನ ನೀಡಲಾಗುತ್ತಿದೆ. ವಸತಿ ನಿಲಯಗಳ ನಿರ್ಮಾಣವಾಗಿದೆ. ಈ ವರ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ 100 ಹೊಸ  ವಸತಿ ನಿಲಯಗಳನ್ನು ಮಾಡುತ್ತಿದ್ದೇವೆ. 1000 ಮಕ್ಕಳು ಇರುವಂತಹ 5 ಮೆಗಾ ವಸತಿ ನಿಲಯ ಕೂಡ ನಿರ್ಮಾಣ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಭೋವಿ ಸಮಾಜಕ್ಕೆ ‌ವಿವಿಧ‌ ಯೋಜನೆಗಳ ಲಾಭ
ವಿದೇಶಕ್ಕೆ ತೆರಳುವವರಿಗೆ ಹಣಕಾಸಿನ ನೆರವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಕಲ್ಲು ಒಡೆಯುವವರಿಂದ ಹಿಡಿದು, ಬಡಿಗೇರರು, ಕುಂಬಾರರು, ವಿಶ್ವಕರ್ಮ ಮತ್ತಿತರ ಕುಶಲ ಕರ್ಮಿಗಳೆಲ್ಲರಿಗೂ 50 ಸಾವಿರ ರೂ. ಸಾಲ/ಸಬ್ಸಿಡಿ ಯೋಜನೆ ರೂಪಿಸುತ್ತಿದ್ದೇವೆ. ಬಡವರಿಗೆ ಮತ್ತು ದುಡಿಯುವ ವರ್ಗದ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಆದ ಶಾಸಕ ಎಸ್. ರಘು, ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com