ಫುಡ್ ಡೆಲಿವರಿ ಬಾಯ್ ವೇಷದಲ್ಲಿ ಡ್ರಗ್ಸ್ ಮಾರಾಟ; ಖತರ್ನಾಕ್ ಪೆಡ್ಲರ್ ಪೊಲೀಸ್ ವಶಕ್ಕೆ

ಆಹಾರ ಸರಬರಾಜು ಮಾಡುವ ನೆಪದಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಉಡುಪಿಯ ಖತರ್ನಾಕ್ ಡ್ರಗ್ಸ್ ದಂಧೆಕೋರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 
ಬಂಧನ
ಬಂಧನ

ಉಡುಪಿ: ಆಹಾರ ಸರಬರಾಜು ಮಾಡುವ ನೆಪದಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಉಡುಪಿಯ ಖತರ್ನಾಕ್ ಡ್ರಗ್ಸ್ ದಂಧೆಕೋರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ಉಡುಪಿ ಮೂಲದ ದೇವಿಪ್ರಸಾದ್ (23) ಬಂಧಿತ ವ್ಯಕ್ತಿಯಾಗಿದ್ದು, ಆತನ ಸಹಚರರಾದ ಪಾಲಕ್ಕಾಡ್ ಮೂಲದ ರವಿಶಂಕರ್ (22) ಮತ್ತು ಅಂಜಲ್ ಬೈಜು (21) ಅವರನ್ನೂ ಪೊಲೀಸರು  ಬಂಧಿಸಿದ್ದಾರೆ. ದೇವಿ ಪ್ರಸಾದ್ ಎಂಬ ಆರೋಪಿ ರವಿಶಂಕರ್‌ ಎಂಬಾತನಿಂದ ಡ್ರಗ್‌ಗಳನ್ನು ಪಡೆದುಕೊಂಡು ಆಹಾರ ಪೂರೈಕೆಯ ನೆಪದಲ್ಲಿ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದ. ರವಿಶಂಕರ್ ಮಣಿಪಾಲ ಸಮೀಪದ ಮಂಚಿ ಗ್ರಾಮದಲ್ಲಿ ನೆಲೆಸಿದ್ದು, ಉಡುಪಿ ಮತ್ತು ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಮಾದಕ ವಸ್ತು ಪೂರೈಕೆ ಸರಪಳಿ ನಡೆಸುತ್ತಿದ್ದ. ಅವನ ಗುರಿ ಯುವಕರಾಗಿದ್ದು, ವಿಶೇಷವಾಗಿ ಮಣಿಪಾಲ ಮತ್ತು ಉಡುಪಿಯ ಕೆಲವು ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ರವಿಶಂಕರ್ ಗಾಂಜಾವನ್ನು ಕೇರಳದಿಂದ ರೈಲಿನಲ್ಲಿ ಮಣಿಪಾಲಕ್ಕೆ ತರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಹತ್ತಿರದಿಂದ ಗಮನಿಸಲು ಯೋಜನೆಯನ್ನು ರೂಪಿಸಿದರು ಮತ್ತು ಅವನ ಜಾಲ ಮತ್ತು ವ್ಯವಹಾರ ಮಾದರಿಯನ್ನು ಅರ್ಥಮಾಡಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ಆತನ ಇಬ್ಬರು ಗೆಳೆಯರು ಕೂಡ ಪೊಲೀಸರ ಕಣ್ಗಾವಲಿನಲ್ಲಿರಿಸಿದ್ದಾರೆ ಎನ್ನಲಾಗಿದೆ.

ಶನಿವಾರ, ಇಂದ್ರಾಳಿ ಮತ್ತು ಮಂಚಿ ನಡುವಿನ ಸ್ಥಳದ ಬಳಿ ದೇವಿ ಪ್ರಸಾದ್ ವ್ಯಾಪಾರಿಗಳು ಮತ್ತು ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ 1,277 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುವಿನ ಮೌಲ್ಯ 30,000 ರೂ ಎಂದು ಹೇಳಲಾಗಿದೆ. ಅಲ್ಲದೆ ನಾಲ್ಕು ಮೊಬೈಲ್ ಫೋನ್ ಹಾಗೂ ಎರಡು ಬೈಕ್ ಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ಕನೇ ಆರೋಪಿ ಉಡುಪಿಯ ರಂಜಿತ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಗಾಂಜಾ ಬೆಳೆದ ರೈತನ ಬಂಧನ, 338 ಕೆಜಿ ಗಾಂಜಾ ವಶಕ್ಕೆ
ಇತ್ತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ (ಸಿಇಎನ್) ಪೊಲೀಸರು ಗಾಂಜಾ ಬೆಳೆದ ರೈತನ ಬಂಧಿಸಿದ್ದು, ಆರೋಪಿಯಿಂದ ಸುಮಾರು 338 ಕೆಜಿ ಗಾಂಜಾ ಬೆಳೆಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಹುಬ್ಬರವಾಡಿ ನಿವಾಸಿ ಹಾಲಪ್ಪ ಲಗಮಣ್ಣ ಪೂಜಾರಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ರೈತನಾಗಿರುವ ಪೂಜಾರಿ ತನ್ನ ಹೊಲದಲ್ಲಿ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಪೂಜಾರಿ ಜಮೀನಿನಲ್ಲಿ ಬೆಳೆಸಿದ್ದ 98 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com