ರಾಜ್ಯದಲ್ಲಿ 9,432 ಪೊಲೀಸ್ ಪೇದೆ ಹುದ್ದೆಗಳು ಖಾಲಿಯಿವೆ: ಆರಗ ಜ್ಞಾನೇಂದ್ರ
ರಾಜ್ಯದಲ್ಲಿ 9,432 ಪೊಲೀಸ್ ಪೇದೆ ಹುದ್ದೆ ಖಾಲಿಯಿದ್ದು, ಪ್ರಸ್ತುತ 3,484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಳಿಕ 1,500 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 5 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published: 21st September 2022 09:22 AM | Last Updated: 21st September 2022 02:13 PM | A+A A-

ಆರಗ ಜ್ಞಾನೇಂದ್ರ
ಬೆಂಗಳೂರು: ರಾಜ್ಯದಲ್ಲಿ 9,432 ಪೊಲೀಸ್ ಪೇದೆ ಹುದ್ದೆ ಖಾಲಿಯಿದ್ದು, ಪ್ರಸ್ತುತ 3,484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಳಿಕ 1,500 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 5 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಪ್ರೀತಂ ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪೊಲೀಸರ ಕೊರತೆ ಇರುವುದು ಸತ್ಯ. ರಾಜ್ಯದಲ್ಲಿ 59,067 ಮಂಜೂರಾದ ಹುದ್ದೆಗಳಿದ್ದು, 43,296 ಪುರುಷರು, 6,339 ಮಂದಿ ಮಹಿಳಾ ಪೇದೆ ಸೇರಿದಂತೆ 49,635 ಮಂದಿ ಇದ್ದಾರೆ. ಉಳಿದಂತೆ 9,432 ಹುದ್ದೆ ಖಾಲಿಯಿವೆ. 2022-23ನೇ ಸಾಲಿನಲ್ಲಿ 3,484 ಹುದ್ದೆ ಭರ್ತಿಗೆ ಸೆ.12ರಂದು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಸದ್ಯದಲ್ಲೇ ಇನ್ನೂ 1,500 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ 22,000 ಪೊಲೀಸ್ ಪೇದೆ ಹುದ್ದೆ ಖಾಲಿ ಇತ್ತು. ಇವತ್ತು ಕೇವಲ 9430 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳು ಖಾಲಿ ಇವೆ. ಈಗಾಗಲೇ 3,500 ಕಾನ್ಸ್ಟೇಬಲ್ ನೇಮಕಾತಿಗೆ ಆದೇಶ ಆಗಿದೆ. ಇನ್ನು 1500 ಜನರ ಸಿವಿಲ್ ಕಾನ್ಸ್ಟೇಬಲ್ ನೇಮಕಾತಿಗೆ ನೋಟಿಫಿಕೇಷನ್ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಬೌದ್ಧಿಕ, ದೈಹಿಕ ಕ್ಷಮತೆ ಹೆಚ್ಚಿಸಲು ಅಗತ್ಯ ಕ್ರಮ: ಸಚಿವ ಆರಗ ಜ್ಞಾನೇಂದ್ರ
ಈ ಸಾಲಿನಲ್ಲಿ ಐದು ಸಾವಿರ ಪೋಸ್ಟ್ ಭರ್ತಿ ಮಾಡುತ್ತೇವೆ. ಇಪ್ಪತ್ತು ವರ್ಷದಲ್ಲಿ ಅತ್ಯಂತ ಕಡಿಮೆ ಹುದ್ದೆ ಖಾಲಿ ಇರುವುದು ಈ ವರ್ಷ ಮಾತ್ರ. ಸಮಾಧಾನಕರ ಸಂಗತಿ. ಕಾನೂನು ಸುವ್ಯವಸ್ಥೆ ನಿಭಾಯಿಸಲು ಪೊಲೀಸರ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.