ದೇವರ ಮೂರ್ತಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ರು. ದಂಡ: ಕೋಲಾರದಲ್ಲೊಂದು ಅಮಾನವೀಯ ಘಟನೆ; 8 ಮಂದಿ ವಿರುದ್ಧ ಪ್ರಕರಣ

ದೇವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿರುವ ಕಾರಣಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಲಕನ ಕುಟುಂಬಕ್ಕೆ ದೈರ್ಯ ಹೇಳಿದ ಜಿಲ್ಲಾಧಿಕಾರಿ
ಬಾಲಕನ ಕುಟುಂಬಕ್ಕೆ ದೈರ್ಯ ಹೇಳಿದ ಜಿಲ್ಲಾಧಿಕಾರಿ

ಕೋಲಾರ:  ದೇವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿರುವ ಕಾರಣಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶೊಭಾ ಹಾಗೂ ರಮೇಶ್ ದಂಪತಿ, ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು. 10 ದಿನಗಳ ಹಿಂದೆ ಗ್ರಾಮದ ಭೂತಮ್ಮ‌ ದೇವರ ಮೂರ್ತಿ ಮೆರವಣಿಗೆ ವೇಳೆ, 15 ವರ್ಷದ ಬಾಲಕ ಚೇತನ್ ದೇವರ ಉತ್ಸವ ಮೂರ್ತಿಗಳನ್ನು ಮುಟ್ಟಿದ್ದಾನೆ.

ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ದೇವರ ಮೂರ್ತಿಯನ್ನು ಶುಚಿಗೊಳಿಸಬೇಕು,  ಇದಕ್ಕಾಗಿ 60 ಸಾವಿರ ದಂಡ ಕಟ್ಟಬೇಕು ಊರಿನ ಮೇಲ್ಜಾತಿ ಮಂದಿ ಆಗ್ರಹಿಸಿದ್ದಾರೆ, ಬಾಲಕನ ತಾಯಿ ಶೋಭ ತಮ್ಮ ಬಳಿ ನೀಡಲು ಅಷ್ಟೊಂದು ಹಣವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ, ಹಣ ನೀಡಲು ಆಗದಿದ್ದರೇ ಊರು ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇದರಿಂದ ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜ ಮತ್ತುಎಸ್ ಪಿ ದೇವರಾಜ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಬಾಲಕನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡದಂತೆ ತಿಳಿಸಿದ್ದಾರೆ.

ಸೆಪ್ಟಂಬರ್ 8 ರಂದು ಘಟನೆ ನಡೆದಿದ್ದು, ವಿಷಯವನ್ನು ಯಾರಿಗೂ ತಿಳಿಸದಂತೆ ಗ್ರಾಮಸ್ಥರು ಬಾಲಕನ ಕುಟುಂಬಕ್ಕೆ ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಂದೇಶ್,  ಬಾಲಕನ ಕುಟುಂಬದಿಂದ ದಂಡ ನೀಡುವಂತೆ ಒತ್ತಾಯಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.    

ಶೋಭಾ ಅವರು ಮಾಸ್ತಿ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಉಳ್ಳೇರಹಳ್ಳಿ ನಿವಾಸಿಗಳಾದ ನಾರಾಯಣಸ್ವಾಮಿ, ರಮೇಶ್, ನಾರಾಯಣಸ್ವಾಮಿ (ಮಾಜಿ ಜಿ.ಪಂ ಸದಸ್ಯ), ವೆಂಕಟೇಶಪ್ಪ, ಕೊಟ್ಟೆಪ್ಪ, ಚಲಪತಿ, ಮೋಹನ್ ರಾವ್ (ಅರ್ಚಕ್) ಮತ್ತು ಚಿನ್ನಯ್ಯ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೂಡಲೇ ಶೋಭಾ ಅವರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದರು. ಶೋಭಾ ಅವರು ಕೆಲಸಕ್ಕಾಗಿ ಪ್ರತಿದಿನ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು, ಆದ್ದರಿಂದ  ಉತ್ತಮ ಸಂಬಳ ಬರುವಲ್ಲಿ ಕೆಲಸ ನೀಡಲು ನಿರ್ಧರಿಸಲಾಯಿತು. ಶೋಭಾ ಅವರಿಗೆ 25 ಸಾವಿರ ಚೆಕ್ ನೀಡಲಾಗಿದ್ದು, ಉಳಿದ ಮೊತ್ತವನ್ನು ನಂತರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಾಜಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com