ಕಲಬುರಗಿ: ಗಾಂಜಾ ದಂಧೆಕೋರರಿಂದ ಸಿಪಿಐ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಶ್ರೀಮಂತ್ ಇಲ್ಲಾಳ್ ಪರಿಸ್ಥಿತಿ ಗಂಭೀರ!
ಮಹಾರಾಷ್ಟ್ರದ ಉಮ್ಮರಗಾ ತಾಲೂಕಿನ ತರೂರಿ ಗ್ರಾಮದಲ್ಲಿ ಗಾಂಜಾ ಬೆಳೆಯುತ್ತಿದ್ದವರ ಮೇಲೆ ದಾಳಿ ನಡೆಸಲು ತೆರಳಿದ್ದ ಕಮಲಾಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Published: 24th September 2022 02:14 PM | Last Updated: 24th September 2022 02:33 PM | A+A A-

ಶ್ರೀಮಂತ್ ಇಲ್ಲಾಳ್
ಕಲಬುರಗಿ: ಮಹಾರಾಷ್ಟ್ರದ ಉಮ್ಮರಗಾ ತಾಲೂಕಿನ ತರೂರಿ ಗ್ರಾಮದಲ್ಲಿ ಗಾಂಜಾ ಬೆಳೆಯುತ್ತಿದ್ದವರನ್ನು ಹಿಡಿಯಲು ದಾಳಿ ತೆರಳಿದ್ದ ಕಮಲಾಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್ ಮೇಲೆ ದಾಳಿ ನಡೆಸಲಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಶ್ರೀಮಂತ ಇಲ್ಲಾಳ್ ಅವರಿಗೆ ಅಗತ್ಯವಿದ್ದರೇ ಬೆಂಗಳೂರು ಅಥವಾ ಹೈದರಾಬಾದ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ ಎಂದು, ಈಶಾನ್ಯ ವಲಯ ಐಜಿಪಿ ಮನೀಶ್ ಖಾರ್ಬಿಕರ್ ಮಾಹಿತಿ ನೀಡಿದ್ದಾರೆ.
ಶ್ರೀಮಂತ್ ಇಲ್ಲಾಳ್ ಅವರ ರಕ್ತದೊತ್ತಡಲ್ಲಿ ಏರು -ಪೇರು ಉಂಟಾಗುತ್ತಿದೆ, ರಕ್ತದೊತ್ತಡ ಸಹಜ ಸ್ಥಿತಿಗೆ ಬಂದ ನಂತರವೇ ಅವರಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳುಹಿಸುವ ನಿರ್ಧಾರ ಮಾಡಬಹುದು ಎಂದು ವೈದ್ಯರು ಹೇಳಿದ್ದಾಗಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮಹಾಗಾಂವ ಪೊಲೀಸ್ ಠಾಣೆಯ ಪೊಲೀಸರ ಕೈಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದ. ಬಸವಕಲ್ಯಾಣ ತಾಂಡಾದ ಗಡಿಭಾಗದ ಮಹಾರಾಷ್ಟ್ರದ ತರೂರಿನಿಂದ ಗಾಂಜಾ ಖರೀದಿಸುತ್ತಿದ್ದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ ಎಂದು ಮೂಲಗಳು ತಿಳಿಸಿವೆ.
ಈತನ ಮಾಹಿತಿಯ ಮೇರೆಗೆ ಸಿಪಿಐ ಶ್ರೀಮಂತ್ ಇಲ್ಲಾಳ್ ನೇತೃತ್ವದ ಮಹಾಗಾಂವ್ ಪೊಲೀಸರ ತಂಡ ತರೂರಿ ಗ್ರಾಮಕ್ಕೆ ತೆರಳಿತ್ತು. ಅವರಲ್ಲಿ ಕೆಲವರು, ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಲು ಮತ್ತು ಹೆಚ್ಚಿನ ಪೊಲೀಸ್ ಪಡೆಯನ್ನು ತರೂರಿ ಗ್ರಾಮಕ್ಕೆ ತರಲು ಉಮ್ಮರ್ಗಾಗೆ ಹೋಗಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ: 4 ಕೋಟಿ ರೂ. ಮೌಲ್ಯದ 210 ಕೆಜಿ ಗಾಂಜಾ ವಶ; ವ್ಯಕ್ತಿ ಬಂಧನ
ಈ ನಡುವೆ ಸುಮಾರು 40 ಜನರ ತಂಡ ಶ್ರೀಮಂತ್ ಇಲ್ಲಾಳ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಇಲ್ಲಾಳ್ ಅವರ ಮುಖ, ಎದೆ ಮತ್ತು ಬೆನ್ನಿನ ಮೇಲೆ ಗಂಭೀರವಾದ ಗಾಯಗಳಾಗಿವೆ, ಇಲ್ಲಾಳ ಅವರ ಮೇಲೆ ದಾಳಿ ನಡೆಸಿದ ಬಳಿಕ ತಂಡ ಪರಾರಿಯಾಗಿದೆ.
ನಂತರ ಮಹಾರಾಷ್ಟ್ರ ಪೊಲೀಸರು ಹಾಗೂ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ರೀಮಂತ ಇಲ್ಲಾಳರನ್ನು ಕಲಬುರಗಿಯ ಆಸ್ಪತ್ರೆಗೆ ಬೆಳಿಗ್ಗೆ 5.00 ಗಂಟೆಗೆ ದಾಖಲಿಸಿದ್ದಾರೆ. ಶ್ರೀಮಂತ್ ಇಲ್ಲಾಳ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಇಲ್ಲಾಳರನ್ನು ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ಡಾ.ಸುದರ್ಶನ್ ತಿಳಿಸಿದ್ದಾರೆ.