ಮೈಸೂರಲ್ಲೇ ತಯಾರಾದ ಸಿಲ್ಕ್ ಸೀರೆ ಉಟ್ಟು, ದಸರಾಗೆ ವಿಶೇಷ ಮೆರುಗು ತಂದ ರಾಷ್ಟ್ರಪತಿ ದ್ರೌಪದಿ ಮುರ್ಮು
ದಸರಾ ಮಹೋತ್ಸವ ಉದ್ಘಾಟಿಸಿದ ಪ್ರಥಮ ರಾಷ್ಟ್ರಪತಿ ಎಂಬ ಗೌರವಕ್ಕೆ ಪಾತ್ರರಾದ ದ್ರೌಪದಿ ಮುರ್ಮು ಅವರು ಉಟ್ಟಿದ್ದ ಸೀರೆ ಇದೀಗ ಎಲ್ಲರ ಗಮನ ಸೆಳೆದಿದೆ. ಹೌದು, ಮುರ್ಮು ಅವರು ಮೈಸೂರಿನಲ್ಲೇ ತಯಾರಾದ ಮೈಸೂರು ರೇಷ್ಮೆ ಸೀರೆ ಧರಿಸಿ ದಸರಾವನ್ನು ಉದ್ಘಾಟಿಸಿದ್ದು ವಿಶೇಷ ಗೌರವ ಸಂದಂತಾಗಿದೆ.
Published: 26th September 2022 03:42 PM | Last Updated: 26th September 2022 04:08 PM | A+A A-

ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಮೈಸೂರು: ನಾಡದೇವತೆ ಚಾಮುಂಡೇಶ್ವರಿಗೆ ದೀಪ ಬೆಳಗಿ ಪುಷ್ಪಾರ್ಚನೆ ಸಲ್ಲಿಸಿ ನಮಿಸುವ ಮೂಲಕ ವೃಶ್ಚಿಕ ಲಗ್ನದಲ್ಲಿ ಬೆಳಗ್ಗೆ 10.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬ ದಸರಾ 2022ಕ್ಕೆ ಅದ್ದೂರಿ ಚಾಲನೆ ನೀಡಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಇತರ ಗಣ್ಯರು ಇದ್ದರು.
ದಸರಾ ಮಹೋತ್ಸವ ಉದ್ಘಾಟಿಸಿದ ಪ್ರಥಮ ರಾಷ್ಟ್ರಪತಿ ಎಂಬ ಗೌರವಕ್ಕೆ ಪಾತ್ರರಾದ ದ್ರೌಪದಿ ಮುರ್ಮು ಅವರು ಉಟ್ಟಿದ್ದ ಸೀರೆ ಇದೀಗ ಎಲ್ಲರ ಗಮನ ಸೆಳೆದಿದೆ. ಹೌದು, ಮುರ್ಮು ಅವರು ಮೈಸೂರಿನಲ್ಲೇ ತಯಾರಾದ ಮೈಸೂರು ರೇಷ್ಮೆ ಸೀರೆ ಧರಿಸಿ ದಸರಾವನ್ನು ಉದ್ಘಾಟಿಸಿದ್ದು ವಿಶೇಷ ಗೌರವ ಸಂದಂತಾಗಿದೆ.
ದ್ರೌಪದಿ ಮುರ್ಮು ಅವರಿಗಾಗಿಯೇ ವಿಶೇಷವಾಗಿ ನೇಯ್ದ ಮೈಸೂರು ರೇಷ್ಮೆ ಸೀರೆ ಇದಾಗಿದ್ದು, ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಜಿಲ್ಲಾಡಳಿತದ ಪರವಾಗಿ ರಾಷ್ಟ್ರಪತಿಯವರನ್ನು ಅಧಿಕೃತವಾಗಿ ಆಹ್ವಾನಿಸುವಾಗ ಗೌರವಸೂಚಕವಾಗಿ ಈ ಸೀರೆಯೊಂದಿಗೆ ಫಲ ತಾಂಬೂಲ ನೀಡಿ ಗೌರವಿಸಿದ್ದರು.
ಇದನ್ನೂ ಓದಿ: Live: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ: ಚಾಮುಂಡಿ ದೇವಿಗೆ ರಾಷ್ಟ್ರಪತಿ ಸೇರಿ ಗಣ್ಯರಿಂದ ಪುಷ್ಪಾರ್ಚನೆ
ಇದೇ ಸೀರೆಯನ್ನು ಉಟ್ಟು ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದ ಮುರ್ಮುರನ್ನು ಕಂಡು ಮೈಸೂರಿಗರಿಗೆ ಸಂತಸ ತಂದಿದೆ.
ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬುದನ್ನು ಅರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರಿ ಸ್ವಾಮ್ಯದ ಕೆಎಸ್ಐಸಿ ರೇಷ್ಮೆ ಕಾರ್ಖಾನೆಗೆ ಈ ಸೀರೆಯ ತಯಾರಿಕೆಗೆ ಆದೇಶಿದ್ದರು. ಬಳಿಕ ಈ ಸೀರೆಯನ್ನು ನೇಯ್ದು ನೀಡಲಾಗಿತ್ತು. ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ಈ ರೇಷ್ಮೆ ಕಾರ್ಖಾನೆಯನ್ನು ಸ್ಥಾಪಿಸಿದ್ದರು.
ಮೈಸೂರು ಸಿಲ್ಕ್ ಸೀರೆ ಬ್ರಾಂಡ್ ವಿಶ್ವಪ್ರಸಿದ್ಧ ಬ್ರಾಂಡ್ ಆಗಿದೆ. ನೂರಾರು ವರ್ಷಗಳಿಂದ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ ಎಂದರೆ ಅಚ್ಚುಮೆಚ್ಚು. ಅಂದಿನಿಂದ ಇಂದಿನವರೆಗೂ ಈ ಸೀರೆಯು ಕಳೆಗುಂದಿಲ್ಲ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಅಪ್ಪಟ ರೇಷ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಿದ ಈ ಉಡುಪನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.