ಕರ್ನಾಟಕ ವಿಧಾನಸಭೆ ಚುನಾವಣೆ: ಹಣದ ಹರಿವನ್ನು ಪರೀಕ್ಷಿಸಲು ಅಂತರರಾಜ್ಯ ಗಡಿಯಲ್ಲಿ ಕಟ್ಟೆಚ್ಚರ
ಮಂಗಳೂರು: ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕಕ್ಕೆ ಹಣದ ಹರಿವು ಮತ್ತು ಉಚಿತ ಕೊಡುಗೆಗಳನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೇರಳದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದೆ.
ಕೇರಳದ ಅಂತರರಾಜ್ಯ ಗಡಿಯಲ್ಲಿ 10 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಅಂತರ್ ಜಿಲ್ಲಾ ಹಾಗೂ ಸ್ಥಳೀಯ ಚೆಕ್ ಪೋಸ್ಟ್ ಸೇರಿದಂತೆ ಒಟ್ಟು 27 ಚೆಕ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಪೊಲೀಸ್ ಮತ್ತು ಇತರ ಇಲಾಖೆಗಳ ನೆರವಿನೊಂದಿಗೆ ಮಾದರಿ ನೀತಿ ಸಂಹಿತೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಚುನಾವಣಾ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಕುಮಾರ್ ಅವರನ್ನು ಚುನಾವಣಾ ನೀತಿ ಸಂಹಿತೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಜಿಲ್ಲಾ ಚುನಾವಣಾ ಕಚೇರಿಯಿಂದ ಪೂರ್ವಾನುಮತಿ ಪಡೆಯದೆ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡದಂತೆ ಮಾಲ್, ಸಭಾಂಗಣ, ಆಡಿಟೋರಿಯಂಗಳು ಮತ್ತು ಚಿತ್ರಮಂದಿರಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ