'ಬಿರಿಯಾನಿ ರೆಡಿ ಇದೆ' ಹೇಳಿಕೆ: ಸಚಿವ ಸೋಮಶೇಖರ್ ವಿರುದ್ಧ ಎಫ್ಐಆರ್ ದಾಖಲು

ಪ್ರಚಾರದ ವೇಳೆ ಕಾರ್ಯಕರ್ತರಿಗೆ ಬಿರಿಯಾನಿ ರೆಡಿ ಇದೆ, ಸವಿಯಿರಿ ಎಂದು ಹೇಳಿದ್ದ ಸಚಿವ ಸೋಮಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಚಿವ ಸೋಮಶೇಖರ್
ಸಚಿವ ಸೋಮಶೇಖರ್

ಬೆಂಗಳೂರು: ಪ್ರಚಾರದ ವೇಳೆ ಕಾರ್ಯಕರ್ತರಿಗೆ ಬಿರಿಯಾನಿ ರೆಡಿ ಇದೆ, ಸವಿಯಿರಿ ಎಂದು ಹೇಳಿದ್ದ ಸಚಿವ ಸೋಮಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಚಾರದ ವೇಳೆ ಬಿರಿಯಾನಿ ಊಟ ಮಾಡುವಂತೆ ಮನವಿ ಮಾಡಿಕೊಂಡಿದ್ದ ಸೋಮಶೇಖರ್ ಅವರ ವಿರುಜ್ಝ ಚುನಾವಣಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಊಟದ ವ್ಯವಸ್ಥೆ ವಿರುದ್ಧ ಜೆಡಿಎಸ್ ನಾಯಕರೊಬ್ಬರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಏ.9ರಂದು ಕೆಂಗೇರಿ ಹೋಬಳಿಯ ದೊಡ್ಡಿಪಾಳ್ಯದ ಕಬ್ಬಾಳಮ್ಮ ದೇವಸ್ಥಾನದ ಬಳಿ ಸೋಮಶೇಖರ್ ಅವರು ಪ್ರಚಾರ ನಡೆಸುತ್ತಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಣ ಪೂರ್ಣಗೊಳಿಸಿಲು ಮುಂದಾದಾಗ ಕಾರ್ಯಕರ್ತರು ಊಟ ಸಿದ್ಧವಿದೆ ಎಂದು ಹೇಳುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪಿದ ಸೋಮಶೇಖರ್ ಆವರು, ಈಗಾಗಲೇ ಊಟಕ್ಕೆ ತಡವಾಗಿದೆ, ಊಟ ಸಿದ್ಧವಾಗಿದೆ’ ಎಂದು ಘೋಷಿಸಿದರು. ಅದೂ ಬಿರಿಯಾನಿ. ದಯವಿಟ್ಟು ಎಲ್ಲರೂ ಅದನ್ನು ಸವಿಯಿರಿ ಎಂದು ಹೇಳಿದರು.

ಸೋಮಶೇಖರ್ ಅವರು ಮತದಾರರಿಗೆ ಆಮಿಷ ಒಡ್ಡಿ ಬಿರಿಯಾನಿ ಔತಣ ನೀಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ಹೇಳಿಕೆಯ ವಿಡಿಯೋ ದೃಶ್ಯಾವಳಿ ಸಮೇತ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ವಿಡಿಯೋ ದೃಶ್ಯಾವಳಿ ಆಧರಿಸಿ ಚುನಾವಣಾಧಿಕಾರಿಗಳು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದು, ಬುಧವಾರ ಸೋಮಶೇಖರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com